ಬೆಂಗಳೂರು:ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾರು ವ್ಯವಹಾರ ಮಾಡುವ ಉದ್ಯಮಿ ಮೇಲೆ ಮಹಿಳೆ ಹಾಗೂ ಇಬ್ಬರು ಸಂಬಂಧಿಕರು ಸೇರಿ ಹಲ್ಲೆ ನಡೆಸಿರುವ ಘಟನೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿ ಇತ್ತೀಚೆಗೆ ನಡೆದಿದೆ. ಹಲ್ಲೆ ನಡೆಸಿದ ರೋನಿತ್, ದುರ್ಗಾ ಮತ್ತು ಆಕೆಯ ಸಹೋದರ ಹಾಗೂ ಇತರ ಆರೋಪಿಗಳ ವಿರುದ್ಧ ಶಂಕರ ನಗರದ ನಿವಾಸಿ ಉದ್ಯಮಿ ಅಖಿಲ್ ಅಲಿಯಾಸ್ ಹೇಮಾದ್ರಿ ಯಾದವ್ ಎಂಬುವವರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ? :ಅಖಿಲ್ ಕಳೆದ ಆರು ವರ್ಷಗಳಿಂದ ಕಾರು ವ್ಯವಹಾರ ನಡೆಸುತ್ತಿದ್ದನು. 2019ರಲ್ಲಿ ವ್ಯವಹಾರ ಸಂಬಂಧ ರೋನಿತ್ ಅಲಿಯಾಸ್ ಅಮೋದಿತ್ ಸಾಮ್ಸನ್ ಎನ್ನುವ ವ್ಯವಹಾರದಲ್ಲಿ ಮೋಸ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ರೋನಿತ್‌ನನ್ನು ಪೊಲೀಸರು ಬಂಧಿಸಿದ್ದರು. ಆದರೆ ರೋನಿತ್ ಜಾಮೀನು ಪಡೆದು ಬಿಡುಗಡೆ ಆಗಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ರೋನಿತ್ ಪದೇ ಪದೆ ಕರೆ ಮಾಡಿ ಅಖಿಲ್ಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಮೇ 1ರಂದು ಉದ್ಯಮಿ ಅಡ್ಡಗಟ್ಟಿ ಹಲ್ಲೆ:ಮೇ 1ರಂದು ರಾತ್ರಿ ಕೆಲಸ ಮುಗಿಸಿಕೊಂಡು ಕಾರು ಚಾಲಕ ನಾಗೇಶ್ ಜತೆ ಉದ್ಯಮಿ ಅಖಿಲ್ ಎಲ್ ಅಂಡ್ ಟಿ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಫ್ಲ್ಯಾಟ್‌ಗೆ ಹೋಗುತ್ತಿದ್ದ ವೇಳೆ, ಆಗ ಆತನ ಕಾರನ್ನು ಹಿಂಬಾಲಿಸಿದ ಆರೋಪಿಗಳು, ಅಪಾರ್ಟ್‌ಮೆಂಟ್ ಗೇಟ್ ಮುಂಭಾಗ ಅಡ್ಡಗಟ್ಟಿದ್ದರು. ಬಳಿಕ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮುಖ, ಎದೆ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ಕಾರು ಚಾಲಕ ನಾಗೇಶ್ ಮೇಲೆಯೂ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಅಖಿಲ್ ತಾವು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆ ನಡೆಸಿರುವುದನ್ನು ಅಲ್ಲಿನ ನಿವಾಸಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಕೂಡಾ ಆಗಿದೆ.