ಕರ್ನಾಟಕ

karnataka

ETV Bharat / state

ಹೈಕಮಾಂಡ್ ನೀತಿ ಪಾಠ ಆಲಿಸಿ ಬಂದ ಡಿಕೆಶಿ: ಸಿದ್ದರಾಮಯ್ಯ ಜೊತೆ ಸಮನ್ವಯಕ್ಕೆ ಯತ್ನ!

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೆ ಮುನಿಸಿಕೊಂಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು ಹೈಕಮಾಂಡ್ ಮನವೊಲಿಸಿ ಕಳುಹಿಸಿದೆ.

banglore
ಹೈಕಮಾಂಡ್ ನೀತಿಪಾಠ

By

Published : Mar 9, 2020, 1:17 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೆ ಮುನಿಸಿಕೊಂಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ​ನ್ನು ಹೈಕಮಾಂಡ್ ಮನವೊಲಿಸಿ ಕಳುಹಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತಷ್ಟು ಮುಂದೂಡಿಕೆ ಆಗಿರುವ ಹಿನ್ನೆಲೆ ಮುನಿಸಿಕೊಂಡು ದಿಲ್ಲಿಗೆ ತೆರಳಿದ್ದ ಡಿಕೆಶಿ, ಹೈಕಮಾಂಡ್ ನಾಯಕರ ಜೊತೆ ಈ ವಿಚಾರವಾಗಿ ಚರ್ಚಿಸಿದ್ದಾರೆ.

ವಿಳಂಬಕ್ಕೆ ಸಮನ್ವಯದ ಕೊರತೆಯ ಕಾರಣ ಎಂದು ತಿಳಿಸಿರುವ ಹೈಕಮಾಂಡ್ ನಾಯಕರು, ಆದಷ್ಟು ಸಿದ್ದರಾಮಯ್ಯ ಹಾಗೂ ಅವರ ಬಣದ ಸದಸ್ಯರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿ. ಇದು ಎಷ್ಟು ಬೇಗ ಸಾಧ್ಯವಾಗುತ್ತದೋ ಅಷ್ಟು ಬೇಗ ಘೋಷಣೆಗೂ ಅವಕಾಶ ಒದಗಿ ಬರಲಿದೆ ಎಂದು ತಿಳಿಸಿ ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ. ಎರಡು ದಿನದ ಹಿಂದೆ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರು ಜಿಲ್ಲೆಗೆ ತೆರಳಿದ್ದರು. ಆ ಸಂದರ್ಭ ಇಬ್ಬರು ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಹೈಕಮಾಂಡ್ ನಾಯಕರು, ಶಿವಕುಮಾರ್​ಗೆ ಈ ಮೇಲಿನ ಸೂಚನೆ ನೀಡುವ ಜೊತೆಗೆ ಹೊಸ ಅಧ್ಯಕ್ಷರ ಘೋಷಣೆ ಆಗುವವರೆಗೂ ತಾವೇ ಮುಂದುವರೆಯುವಂತೆ ದಿನೇಶ್ ಗುಂಡೂರಾವ್​ಗೆ ತಿಳಿಸಿ ಕಳುಹಿಸಲಾಗಿದೆ.

ಡಿಕೆಶಿಗೆ ಕೆಲವೊಂದು ಸಲಹೆ ನೀಡಿರುವ ಹೈಕಮಾಂಡ್, ಮೊದಲು ಸಿದ್ದರಾಮಯ್ಯನವರ ಜೊತೆ ಸಮನ್ವಯ ಸಾಧಿಸಿ. ಹೇಗಾದರೂ ಮಾಡಿ ಅವರನ್ನು ಒಪ್ಪಿಸಿ ನಂತರ ದೆಹಲಿಗೆ ಬನ್ನಿ. ಸಿದ್ದರಾಮಯ್ಯನವರನ್ನು ಹೊರಗಿಟ್ಟು ನೇಮಕ ಮಾಡುವುದು ಅಸಾಧ್ಯ. ನಿಮ್ಮ ಸೇವೆ, ಪಕ್ಷ ನಿಷ್ಠೆಯನ್ನೂ ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಆದರೆ ಈಗ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದಕ್ಕೆ ಎಲ್ಲರೂ ಒಗ್ಗೂಡಿದರೆ ಮಾತ್ರ ಸಾಧ್ಯ ಎಂಬ ಸ್ಪಷ್ಟ ಸಂದೇಶವನ್ನು ನೀಡಿ ಕಳುಹಿಸಿದೆ ಎನ್ನಲಾಗಿದೆ.

ಹೀಗಾಗಿ ಅವರನ್ನು ಒಪ್ಪಿಸಿಕೊಂಡು ನೀವು ದೆಹಲಿಗೆ ಬನ್ನಿ. ನಿಮಗೆ ಅವಕಾಶದ ಬಾಗಿಲು ಸದಾ ತೆರೆದೇ ಇರುತ್ತದೆ ಎಂದು ಹೇಳಿರುವ ಹೈಕಮಾಂಡ್ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿವಕುಮಾರ್, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನು ಆದಷ್ಟು ಶೀಘ್ರ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಮಾಲೋಚಿಸಲು ನಿರ್ಧರಿಸಿರುವ ಅವರು, ಸಿದ್ದರಾಮಯ್ಯ ಭೇಟಿಯ ಹಸಿರು ನಿಶಾನೆಗಾಗಿ ಕಾದಿದ್ದಾರೆ.

ABOUT THE AUTHOR

...view details