ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೆಂಗಳೂರಿನ 43 ಕಡೆಗಳಲ್ಲಿ ದಾಳಿ ನಡೆಸಿದೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಗಳು ಸೇರಿದಂತೆ 43 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ.
ದಾಳಿ ವೇಳೆ ಚಾಕು, ಕಬ್ಬಿಣದ ರಾಡುಗಳು ಸೇರಿದಂತೆ ಹಲವು ರೀತಿಯ ಆಯುಧಗಳು ಸಿಕ್ಕಿದ್ದು, ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಗಲಭೆ ಪ್ರಕರಣ ಸಂಬಂಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ನಡೆದ ಗಲಾಟೆಯಲ್ಲಿ 124 ಹಾಗೂ ಡಿ.ಜೆ.ಹಳ್ಳಿಯಲ್ಲಿ 169 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಎನ್ಐಎ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಎನ್ಐಐ ಅಧಿಕಾರಿಗಳು ಸೆಪ್ಟೆಂಬರ್ನಲ್ಲಿ ನಗರದ 30 ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಪ್ರಮುಖ ಆರೋಪಿ 44 ವರ್ಷದ ಸಯ್ಯದ್ ಸಾಧಿಕ್ ಆಲಿ ಎಂಬಾತನನ್ನು ಬಂಧಿಸಿದ್ದರು. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಈಶಾನ್ಯ, ಪೂರ್ವ, ಉತ್ತರ ವಿಭಾಗಗಳಿಂದ ಆರೋಪಿಗಳು ಭಾಗಿಯಾಗಿದ್ದರು. ಅಲ್ಲದೆ ಬಂಧಿತರಲ್ಲಿ 30ಕ್ಕೂ ಹೆಚ್ಚು ಮಂದಿ ಉಗ್ರರೊಂದಿಗೆ ನಂಟು ಹೊಂದಿರುವುದು ವಿಚಾರಣೆ ವೇಳೆ ತಿಳಿದು ಬಂದಿತ್ತು. ದಾಳಿ ವೇಳೆ ಏರ್ ಗನ್, ಶಾರ್ಪ್ ವೆಪನ್ಸ್, ಕಬ್ಬಿಣದ ರಾಡ್, ಡಿವಿಆರ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.