ಕರ್ನಾಟಕ

karnataka

ETV Bharat / state

ಸಚಿವ ನಾಗೇಶ್ ಮನೆ ಮೇಲೆ ದಾಳಿ: ಸಿ.ಸಿ. ಪಾಟೀಲ್, ಸುಧಾಕರ್ ಖಂಡನೆ

ಸಚಿವರಾದ ಬಿ.ಸಿ. ನಾಗೇಶ್ ಅವರ ತಿಪಟೂರಿನ ಮನೆಯ ಮೇಲೆ ಕಾಂಗ್ರೆಸ್ ಪ್ರೇರಿತರು ಹಾಗೂ ಎನ್ಎಸ್​ಯುಐ ಬೆಂಬಲಿಗರು ದಾಳಿ ನಡೆಸಿದ್ದಾರೆ. ಇದನ್ನು ಸಚಿವ ಸಿ.ಸಿ. ಪಾಟೀಲ್ ಹಾಗೂ ಸಚಿವ ಸುಧಾಕರ್​ ಖಂಡಿಸಿದ್ದಾರೆ.

C C Patil and Sudhakar condemn the attack on Minister Nagesh house
ಸಿ.ಸಿ. ಪಾಟೀಲ್, ಸುಧಾಕರ್ ಖಂಡನೆ

By

Published : Jun 1, 2022, 10:14 PM IST

ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರ ತಿಪಟೂರಿನ ಮನೆಯ ಮೇಲೆ ಕಾಂಗ್ರೆಸ್ ಪ್ರೇರಿತರು ಹಾಗೂ ಎನ್ಎಸ್​ಯುಐ ಬೆಂಬಲಿಗರು ಬುಧವಾರ ದಾಳಿ ನಡೆಸಿದ್ದರು. ಈ ಘಟನೆ ಖಂಡನೀಯ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಮಾತು-ಮಾತಿಗೂ ಪ್ರಜಾಪ್ರಭುತ್ವ, ಅಹಿಂಸೆ, ಗಾಂಧಿವಾದದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷವು, ತನ್ನ ಹಿಂಬಾಲಕರ ಪಡೆಯಾದ ಎನ್ಎಸ್​ಯುಐ ಮೂಲಕ ಈ ರೀತಿಯ ಹಿಂಸಾ ಕೃತ್ಯಗಳಿಗೆ, ಗೂಂಡಾಗಿರಿಗೆ ಪ್ರಚೋದನೆ ನೀಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ವ್ಯಕ್ತಪಡಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ, ಅಹಿಂಸೆಯಂತಹ ಹಲವು ಮಾರ್ಗಗಳಿವೆ. ಆದರೆ ಇವುಗಳನ್ನೆಲ್ಲ ಬಿಟ್ಟು ಒಬ್ಬ ಜನಪ್ರತಿನಿಧಿಯ ಮನೆಯ ಮೇಲೆ ದಾಳಿ ಮಾಡುವಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ಅವರ ನೈತಿಕ ಅಧಃಪತನವನ್ನು ತೋರಿಸುತ್ತದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಖಂಡಿಸಿದ್ದಾರೆ.

ಇದನ್ನೂ ಓದಿ:ಸಚಿವ ನಾಗೇಶ್​ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ 15 ಮಂದಿ ಪೊಲೀಸ್​ ವಶಕ್ಕೆ : ಆರಗ ಜ್ಞಾನೇಂದ್ರ

ಇಂತಹ ವಾಮಮಾರ್ಗದಿಂದ ನಮ್ಮ ಬಿಜೆಪಿ ಸರ್ಕಾರವನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಮಿತ್ರ ಮಂಡಳಿಯವರು ಮೊದಲು ಅರ್ಥಮಾಡಿಕೊಳ್ಳಬೇಕು. ಸಚಿವ ನಾಗೇಶ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಂತಹ ರಾಷ್ಟ್ರ ಭಕ್ತ ಸಂಘಟನೆಯಿಂದ ಬೆಳೆದು ಬಂದವರು. ಈ ರೀತಿಯ ದುಷ್ಕೃತ್ಯಗಳಿಂದ ಅವರನ್ನು ಮಣಿಸಲು ಸಾಧ್ಯವಿಲ್ಲ. ರಾಜಕೀಯದ ಅಭಿಪ್ರಾಯ ವ್ಯತ್ಯಾಸಗಳು ಏನೇ ಇದ್ದರೂ ಅದಕ್ಕೆ ಹಿಂಸೆ ಪರಿಹಾರವಲ್ಲ. ನಮ್ಮ ರಾಜ್ಯವು ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದ್ದಾರೆ. ಅವರ ಈ ಧ್ಯೇಯವಾಕ್ಯಕ್ಕೆ ಇಂಥ ಹೇಯ ಘಟನೆಗಳಿಂದ ಮಸಿ ಬಳಿದಂತಾಗುತ್ತದೆ. ಕರ್ನಾಟಕದ ಗೌರವ ಪ್ರತಿಷ್ಠೆಗಳಿಗೆ ಈ ರೀತಿ ಧಕ್ಕೆ ತರಲು ಪ್ರಯತ್ನಿಸುವ ಶಕ್ತಿಗಳನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಸಿ.ಸಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಸುಧಾಕರ್ ಖಂಡನೆ:ಸದಾ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ ಬಳಸಿಕೊಂಡು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ನಿವಾಸಕ್ಕೆ ನುಗ್ಗಿ, ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ನಡೆಸಿರುವುದು ಖಂಡನೀಯ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಅಧಿಕಾರದಿಂದ ದೂರವಾಗಿರುವ ಕಾಂಗ್ರೆಸ್ ಪಕ್ಷ ಹತಾಶೆಯಿಂದ ರಾಜ್ಯದಲ್ಲಿ ಗೂಂಡಾ ರಾಜಕೀಯ ಸಂಸ್ಕೃತಿ ಮುಂದುವರಿಸಿರಿವುದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details