ಬೆಂಗಳೂರು:ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಹಲವು ಅಚ್ಚರಿ ಫಲಿತಾಂಶಗಳನ್ನು ನೀಡಿದೆ. ಈ ಬಾರಿಯ ಹೈ ವೋಲ್ಟೇಜ್ ಸಮರದಲ್ಲಿ ಭಾರೀ ಅಂತರದ ಗೆಲವು ಸಾಧಿಸಿದವರು ಯಾರು?, ಅತಿ ಅಲ್ಪ ಮತಗಳಿಂದ ವಿಜಯ ಪತಾಕೆ ಹಾರಿಸಿದವರು ಯಾರು ಗೊತ್ತಾ?.
ಈ ಬಾರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಲವು ಆಘಾತಕಾರಿ ಮತ್ತು ಅಚ್ಚರಿ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಸೋಲಿಲ್ಲದ ಸರದಾರರು ಹೀನಾಯ ಸೋಲು ಕಂಡಿದ್ದರೆ, ಬಿಜೆಪಿಯ ಹೊಸ ಮುಖಗಳು ಮೋದಿ ಅಲೆಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಮೋದಿ ಸುನಾಮಿ ಹೇಗಿತ್ತೆಂದರೆ ಎದುರಾಳಿಗಳು ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿದ್ದಾರೆ.
ಇತ್ತ ವಿವಾದಿತ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕಳೆದ ಲೋಕ ಸಮರದಲ್ಲಿ ಬಿ.ಎಸ್.ಯಡಿಯೂರಪ್ಪ ಅತಿ ಹೆಚ್ಚು 3,63,305 ಮತಗಳ ಅಂತರದ ಗೆಲುವು ಸಾಧಿಸಿದ್ದ ಹೆಗ್ಗಳಿಕೆ ಪಡೆದಿದ್ದರು. ಈ ಬಾರಿ ಹೆಗಡೆ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷರ ದಾಖಲೆಯನ್ನು ಮುರಿದಿದ್ದು, ಬರೋಬ್ಬರಿ 4,79,649 ಮತಗಳ ಅಂತರದಲ್ಲಿ ಎದುರಾಳಿ ಆನಂದ್ ಅಸ್ನೋಟಿಕರ್ ಅವರನ್ನು ಸೋಲಿಸಿದ್ದಾರೆ.
ಆ ಮೂಲಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸಂಸದ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಇದು ಮೋದಿ ಅಲೆಯಲ್ಲಿ ಅತಿ ಹೆಚ್ಚು ಅಂತರದ ಬಿಜೆಪಿ ಅಭ್ಯರ್ಥಿ ಗೆಲುವಾಗಿದ್ದರೆ, ಅತಿ ಕಡಿಮೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಗೆಲುವಿನ ನಗೆ ಬೀರಿದ್ದಾರೆ.
ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅತ್ಯಂತ ಅಲ್ಪ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ದ್ರುವನಾರಾಯಣ ವಿರುದ್ಧ ಕೇವಲ 1,817 ಮತಗಳ ಅಂತರದಲ್ಲಿ ಪ್ರಯಾಸದ ಗೆಲವು ಕಂಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ಅಲ್ಪ ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ರಮೇಶ್ ವಿಶ್ವನಾಥ್ ಕಟ್ಟಿ ವಿರುದ್ಧ ಹುಕ್ಕೇರಿ ಕೇವಲ 3,003 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಈ ಬಾರಿ ಶ್ರೀನಿವಾಸ್ ಪ್ರಸಾದ್ ಅದಕ್ಕಿಂತ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.