ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಅಪ್ರಚಾರದ ಸುದ್ದಿಯಾಗಿದ್ದು, ಈ ಕುರಿತು ಸಚಿವರು ನಗರದಲ್ಲಿ ಇಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಪ್ರತಿದಿನ ಮುಖಂಡರ ಜೊತೆ ಬಿಜೆಪಿಗೆ ಮತವನ್ನು ಕೇಳುತ್ತಿದ್ದೇವೆ. ಮನೆ ಮನೆಗೆ ಭೇಟಿ ನೀಡಿ ಹಾಗೂ ಬೂತ್ ಮಟ್ಟದ ಸಭೆಗಳನ್ನು ನಡೆಸುತ್ತಿದ್ದೇವೆ. ಬಿಜೆಪಿ ನನಗೆ ಒಂದು ದೊಡ್ಡ ಗೌರವ ನೀಡಿದೆ. ನಾನು ಇರುವವರೆಗೂ ಬಿಜೆಪಿಯಲ್ಲಿ ಇರುತ್ತೇನೆ. ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬರುವ ಅನೇಕ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಬೈ ಎಲೆಕ್ಷನ್ನಲ್ಲಿ ಗೆದ್ದಿದ್ದೇನೆ. ಸಚಿವರ ಸ್ಥಾನವನ್ನು ಕೊಟ್ಟಿದ್ದಾರೆ. ನನ್ನ ಕ್ಷೇತ್ರದ ಜನರ ಗೌರವವನ್ನು ಉಳಿಸಿಕೊಂಡು ಭಾರತೀಯ ಜನತಾ ಪಕ್ಷದಲ್ಲಿ ಇರುತ್ತೇನೆ ಎಂದು ತಿಳಿಸಿದರು.
ಎ ಟಿ ರಾಮಸ್ವಾಮಿ ಬಿಜೆಪಿಗೆ: ಜೆಡಿಎಸ್ಗೆ ರಾಜೀನಾಮೆ ನೀಡಿರುವ ಎ.ಟಿ.ರಾಮಸ್ವಾಮಿ ಅವರು ಬಿಜೆಪಿ ಬರುತ್ತಾರೆ. ನೂರಕ್ಕೆ ನೂರರಷ್ಟು ಅವರು ಬಿಜೆಪಿಗೆ ಬರುವರು. ನಾನೇ ಖುದ್ದಾಗಿ ದೆಹಲಿಗೆ ಕರೆದೊಯ್ದು ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿ ಮಾಹಿತಿ ನೀಡಿದರು. ಕ್ಷೇತ್ರದ ಜನರಿಗಾಗಿ ನಾನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ಕೆಲಸ ಕಾರ್ಯವನ್ನು ಜನ ಗುರುತಿಸಿದ್ದಾರೆ. ಜನರು ನನಗೆ ನೀಡುತ್ತಿರುವ ಗೌರವ ನಾನು ನಿರೀಕ್ಷೆ ಮಾಡಿರಲಿಲ್ಲ. ನನಗೆ ಉತ್ತಮ ಮಟ್ಟದಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಕ್ಷೇತ್ರದ ಜನರನ್ನು ಪ್ರಶಂಸಿಸಿದರು.