ಬೆಂಗಳೂರು: ಕಸದ ಬ್ಲಾಕ್ ಸ್ಪಾಟ್‌ಗಳು ಹೆಚ್ಚುತ್ತಿದ್ದು, ಬಿಬಿಎಂಪಿ ನೇಮಕ ಮಾಡಿಕೊಂಡಿರುವ ಮಾರ್ಷಲ್ಗಳನ್ನು ಮೂಲ ಕರ್ತವ್ಯಕ್ಕೆ ಮರು ನಿಯೋಜಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಹಿಳಾ ಮುಖಂಡರಾದ ಜನನಿ ಭರತ್ ಆಗ್ರಹಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಷಲ್ಗಳನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿದ್ದು ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹಿಡಿದು ದಂಡ ವಿಧಿಸಲು ಹಾಗೂ ಬ್ಲಾಕ್ ಸ್ಪಾಟ್‌ಗಳು ಹೆಚ್ಚಾಗದಂತೆ ನಿಗಾವಹಿಸುವ ಸಲುವಾಗಿ. ಆದರೆ ಬಿಬಿಎಂಪಿ ಈ ಕೆಲಸದಿಂದ ಇವರನ್ನು ವಿಮುಖರನ್ನಾಗಿ ಮಾಡಿ ಜನರ ಸುಲಿಗೆಗೆ ಇಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಪ್ ಪಕ್ಷ ನಡೆಸಿದ ಸರ್ವೇಕ್ಷಣೆ ಪ್ರಕಾರ ನಗರದಲ್ಲಿ ಸುಮಾರು 1038ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್ (ಕಸದ ರಾಶಿಗಳು) ಕಂಡು ಬಂದಿವೆ. ಇದರಿಂದ ಸೊಳ್ಳೆ, ಹಂದಿ, ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಕಸದ ಮಾಫಿಯಾ ಜತೆ ಕೈಜೋಡಿಸಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನರನ್ನು ದೋಚುವುದನ್ನು ನಿಲ್ಲಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿರುವ ಸಿಎಂ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಕಸದ ಮಾಫಿಯಾ ಜತೆ ಕೈಜೋಡಿಸಿರುವ ಸರ್ಕಾರ ಹಾಗೂ ಬಿಬಿಎಂಪಿ 198 ಪ್ಯಾಕೇಜ್‌ಗಳನ್ನು 89ಕ್ಕೆ ಇಳಿಸಿರುವ ಕಾರಣ ಕಸ ಸಂಗ್ರಹ ವ್ಯತ್ಯಯವಾಗಿ ಬ್ಲಾಕ್ ಸ್ಪಾಟ್‌ಗಳು ಹೆಚ್ಚುತ್ತಿವೆ. ಈಗಾಗಲೇ ನಗರದಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಸದ ರಾಶಿಗಳಿಂದ ಸೊಳ್ಳೆ ಉತ್ಪತ್ತಿಯಾಗಿ ಜನರು ರೋಗ-ರುಜಿಗಳಿಂದ ನರಳಾಡಬೇಕೆನ್ನುವುದು ಬಿಬಿಎಂಪಿ ಅಧಿಕಾರಿಗಳ ಉದ್ದೇಶವಿರಬೇಕು. ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಕೊಡಬೇಕು. ಪ್ರತಿ ಮನೆ ಮನೆಯಿಂದ ಕಸ ಸಂಗ್ರಹಕ್ಕೆಂದೇ 600ರಷ್ಟು ಸೆಸ್ ಏಕೆ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.