ಬೆಂಗಳೂರು: ಮಾದಕ ವಸ್ತು ಸರಬರಾಜು ಮಾಡುವ ಆರೋಪಿಗಳಿಗೆ ಪಾಠ ಕಲಿಸಲು ಇದೇ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಆಸ್ತಿ ಮುಟ್ಟುಗೋಳು ಹಾಕುತ್ತಿದ್ದಾರೆ. ಮಲ್ಲೇಶ್ ಎಂಬ ಆರೋಪಿ ಮಾದಕವಸ್ತು ಸರಬರಾಜಿನಿಂದಲೇ ಸಂಪಾದಿಸಿದ್ದ ಸುಮಾರು 50 ಲಕ್ಷ ರೂ ಮೌಲ್ಯದ ವಿವಿಧ ಆಸ್ತಿಯನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.
ದೇಶದ ವಿವಿಧ ರಾಜ್ಯಗಳಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿ ಮಲ್ಲೇಶ್ ಮೇಲೆ ಕಳೆದ 12 ವರ್ಷಗಳ ಅವಧಿಯಲ್ಲಿ ನಗರದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿದ್ದವು. ಗಾಂಜಾ ಮಾರಾಟದಿಂದ ಸಂಪಾದಿಸಿದ ಹಣದಲ್ಲಿ ಪತ್ನಿ ಹಾಗೂ ಮಗನ ಹೆಸರಿನಲ್ಲಿ 8 ಎಕರೆ ಕೃಷಿ ಭೂಮಿಯನ್ನೂ ಖರೀದಿಸಿದ್ದಾನೆ ಎಂದು ಹೇಳಲಾಗಿದೆ.
ಓದಿ :ತಾಯಿ ಶವ ಮನೆಯಲ್ಲಿ.. ಮಗನ ವಿವಾಹ ದೇವಸ್ಥಾನದಲ್ಲಿ.. ವಿಚಿತ್ರ ಮದುವೆ!!
ಪ್ರಥಮ ಬಾರಿಗೆ ನಗರದ ಸಿಸಿಬಿ ಪೊಲೀಸರು, 50 ಲಕ್ಷ ರೂ ಮೌಲ್ಯದ ಅಕ್ರಮ ಚರಾಸ್ಥಿ ಹಾಗೂ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ನೀಡುವಂತೆ ಚೆನ್ನೈನ ವಿಶೇಷ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದರು. ಆದೇಶ ಹೊರಬಿದ್ದ ತಕ್ಷಣ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.
ಅಪರಾಧಿ ಮಲ್ಲೇಶ್ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಿಂದ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಿ ಗಳಿಸಿದ್ದ ಹಣದಲ್ಲಿ 2013ರಲ್ಲಿ ತನ್ನ ಮಗ ಹಾಗೂ ಪತ್ನಿಯ ಹೆಸರಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 50 ಲಕ್ಷ ರೂ ಬೆಲೆ ಬಾಳುವ 8 ಎಕರೆ ಕೃಷಿ ಜಮೀನು ಹಾಗೂ ಇವರಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 3 ಲಕ್ಷ ರೂ ಹಣವನ್ನು ತನಿಖಾಧಿಕಾರಿ ಪತ್ತೆ ಹಚ್ಚಿದ್ದರು ಎಂದು ಮಾಹಿತಿ ನೀಡಿದ್ದಾರೆ.
12 ವರ್ಷದಿಂದ ಗಾಂಜಾ ಕಳ್ಳ ಸಾಗಣೆ:ಕೋಣನಕುಂಟೆ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್.ಅಶೋಕ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಕಳೆದ ಸುಮಾರು 12 ವರ್ಷಗಳಿಂದ ಗಾಂಜಾ ಕಳ್ಳಸಾಗಾಣಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಬೆಂಗಳೂರು ನಗರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 2014 ರಿಂದ 2022 ರವರೆಗೆ ಭಾಗಿಯಾಗಿದ್ದ ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದ ಜಿ.ಮಲ್ಲೇಶ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ರಮಣ್ ಗುಪ್ತ ಮಾಹಿತಿ ನೀಡಿದ್ದಾರೆ.