ಬೆಂಗಳೂರು: ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಜಾಟಪಟಿಗೆ ಮಳೆಗಾಲದ ಅಧಿವೇಶನದ ವೇದಿಕೆ ಸಜ್ಜಾಗಿದೆ. ಕೋವಿಡ್-19 ಹಿನ್ನೆಲೆ ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಮಳೆಗಾಲದ ಅಧಿವೇಶನ ಸೆ.21ರಿಂದ ಆರಂಭಗೊಳ್ಳಲಿದೆ.
ಸೆಪ್ಟಂಬರ್ 21ರಿಂದ 30ರವರೆಗೆ ಮಳೆಗಾಲದ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಮಧ್ಯೆ ಸದನದಲ್ಲಿ ಯಾವೆಲ್ಲ ವಿಷಯ, ಚರ್ಚೆಗಳು ಗದ್ದಲಕ್ಕೆ ಕಾರಣವಾಗುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಮಾರ್ಚ್ ಬಳಿಕ ಇದೀಗ ತಡವಾಗಿ ಮಳೆಗಾಲದ ಅಧಿವೇಶನವನ್ನು ಕರೆಯಲಾಗಿದೆ.
ಪೈಬರ್ ಗ್ಲಾಸ್ ಶೀಟ್ ಅಳವಡಿಕೆ: ಸದನದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಸಿದ್ಧತೆಗಳನ್ನು ಕೈಗೊಂಡಿದ್ದು, ಒಂದು ಸೀಟು ಬಿಟ್ಟು ಒಂದರಂತೆ ಶಾಸಕರಿಗೆ ಕೂರಲು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಕೂರುವ ಪ್ರತಿ ಸೀಟು ಹಾಗೂ ಟೇಬಲ್ಗಳ ಮಧ್ಯೆ ಪೈಬರ್ ಗ್ಲಾಸ್ ಶೀಟ್ ಗಳನ್ನು ಅಳವಡಿಸಿ ಪ್ರತ್ಯೇಕಿಸಲಾಗಿದೆ.
ಕೋವಿಡ್ ಪರೀಕ್ಷೆ ಕಡ್ಡಾಯ: ಕಲಾಪಕ್ಕೆ ಹಾಜರಾಗುವ ಎಲ್ಲಾ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು, ಮಾಧ್ಯಮದವರು ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿರಬೇಕು. ಸದನದೊಳಗೆ ಪ್ರಧಾನ ಕಾರ್ಯದರ್ಶಿ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ಕಲಾಪಕ್ಕೆ ಕೈಗೊಂಡ ಮುಂಜಾಗ್ರತ ಕ್ರಮ ಇತರೆ ಅಧಿಕಾರಿಗಳು ಸೆಂಟ್ರಲ್ ಹಾಲ್ನಲ್ಲಿ ಕೂರಬೇಕು. ಪ್ರತಿ ಮೂರು ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬ್ಯಾಂಕ್ವೆಟ್ ಹಾಲ್ನಲ್ಲಿ ಸೆ.18ರಿಂದ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಪ್ರತಿ ಮೂರು ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ.
ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ: ಕಲಾಪಕ್ಕೆ ಬರುವ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅದರ ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯವಾಗಿದೆ. ಎಲ್ಲಾ ಶಾಸಕರಿಗೆ ಪ್ರತಿದಿನ ಸ್ಯಾನಿಟೈಸರ್ ಬಾಟಲ್‌ಗಳನ್ನು ನೀಡಲಾಗುತ್ತದೆ. ಶಾಸಕರು, ಅಧಿಕಾರಿಗಳು ಕೂರುವ ಜಾಗದಲ್ಲಿ ಸ್ಯಾನಿಟೈಸಿಂಗ್ ಮಾಡಲಾಗುತ್ತದೆ. ಕಲಾಪ ವರದಿ ಮಾಡುವ ಮಾಧ್ಯಮದವರಿಗೆ ಮೊದಲ ಮಹಡಿಯಲ್ಲಿರುವ ವೀಕ್ಷಕರ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.
ಇತರೆ ಮುಂಜಾಗ್ರತಾ ಕ್ರಮ: ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಸಚಿವರು/ಶಾಸಕರ ಜೊತೆಗೆ ಒಬ್ಬ ಆಪ್ತ ಸಹಾಯಕರು, ಒಬ್ಬ ಗನ್ಮ್ಯಾನ್ಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಪ್ರವೇಶಿಸುವ ಆಪ್ತ ಸಹಾಯಕರು, ಗನ್ ಮ್ಯಾನ್ಗಳು ಪಶ್ಚಿಮ ದ್ವಾರದ 1ನೇ ಮಹಡಿಗೆ ಹೋಗಲು ಅವಕಾಶ ಇರುವುದಿಲ್ಲ.
ಗನ್‌ಮಾನ್‌ಗಳಿಗೆ ಬಾಂಕ್ವೆಟ್ ಹಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಲಾಗಿರುತ್ತದೆ. ಆಪ್ತ ಸಹಾಯಕರಿಗೆ ವಿಧಾನಸೌಧ ಪೂರ್ವ ದ್ವಾರದ ಸೆಂಟ್ರಲ್ ಹಾಲ್ನಲ್ಲಿ ಕುಳಿತು ಕೊಳ್ಳಲು ಅವಕಾಶ ಮಾಡಲಾಗುತ್ತದೆ. ಉತ್ತರ ದ್ವಾರದ ಮೂಲಕ ಎಲ್ಲಾ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ, ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. ವಿಧಾನಸೌಧದ ಪೂರ್ವ ದ್ವಾರದಲ್ಲಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.
ಮಾಧ್ಯಮದವರಿಗೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಮೀಡಿಯಾ ಸ್ಟ್ಯಾಂಡ್ ಮತ್ತು ಸೆಂಟ್ರಲ್ ಹಾಲ್ನಲ್ಲಿರುವ ಮೀಡಿಯಾ ಸ್ಟ್ಯಾಂಡ್ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ವಿಧಾನಸಭಾ ಪಶ್ಚಿಮ ದ್ವಾರದ 1ನೇ ಮಹಡಿಯ ಮೊಗಸಾಲೆಯಲ್ಲಿ ಕುಳಿತುಕೊಳ್ಳಲು/ ಯಾರಿಗೂ ಅವಕಾಶವಿರುವುದಿಲ್ಲ.
ವಿಧಾನಸೌಧದ ಪೂರ್ವ ದ್ವಾರದ ಸೆಂಟ್ರಲ್ ಹಾಲ್ನಲ್ಲಿ ಮಾಧ್ಯಮದವರಿಗೆ, ಆಪ್ತ ಸಹಾಯಕರಿಗೆ ಮತ್ತು ವಿಧಾನಸಭೆ, ಪರಿಷತ್ ಸಿಬ್ಬಂದಿಗಳಿಗೆ ಬಿಟ್ಟು ಬೇರೆಯವರಿಗೆ ಪ್ರವೇಶಕ್ಕೆ ಅವಕಾಶವಿರುವದಿಲ್ಲ. ಅಧಿವೇಶನ ಅವಧಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.