ಕರ್ನಾಟಕ

karnataka

ETV Bharat / state

ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ 2020ಕ್ಕೆ ಒಪ್ಪಿಗೆ ನೀಡಿದ ವಿಧಾನಸಭೆ - ಬೆಂಗಳೂರು

ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಂಡಿಸಿದ ಈ ವಿಧೇಯಕಕ್ಕೆ ಸದನ ಧ್ವನಿ ಮತದ ಅಂಗೀಕಾರ ನೀಡಿತು

Assembly session
ವಿಧಾನಸಭೆ

By

Published : Mar 17, 2020, 5:53 PM IST

ಬೆಂಗಳೂರು :ಲೋಕಾಯುಕ್ತರು ಯಾವುದೇ ಪ್ರಕರಣದ ವಿಚಾರಣೆಯನ್ನು ತಾವಾಗಿಯೇ ಮಾಡಲಾಗದಿದ್ದ ಸಂದರ್ಭದಲ್ಲಿ ಅಂತಹ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವರ್ಗಾವಣೆ ಮಾಡುವ ಅಧಿಕಾರ ನೀಡುವ ಉದ್ದೇಶದ ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ 2020ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿತು.

ಕರ್ನಾಟಕ ಲೋಕಾಯುಕ್ತ ವಿಧೇಯಕ 2020ಕ್ಕೆ ಒಪ್ಪಿಗೆ ನೀಡಿದ ವಿಧಾನಸಭೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಂಡಿಸಿದ ಈ ವಿಧೇಯಕಕ್ಕೆ ಸದನ ಧ್ವನಿ ಮತದ ಅಂಗೀಕಾರ ನೀಡಿತು. ಇದಕ್ಕೂ ಮುನ್ನ ವಿಧೇಯಕ ಕುರಿತು ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಲೋಕಾಯುಕ್ತರು ಅವರಾಗಿಯೇ ಯಾವುದೇ ಪ್ರಕರಣದ ವಿಚಾರಣೆ ಮಾಡಲಾಗುವುದಿಲ್ಲ ಎಂದಾಗ ಉಪ ಲೋಕಾಯುಕ್ತರಿಗೆ ವರ್ಗಾಯಿಸುವ ಅಧಿಕಾರ ನೀಡುವ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ. ಲೋಕಾಯುಕ್ತರು ಸ್ವಂತ ಅಥವಾ ಬೇರೆ ಕಾರಣಗಳಿಂದ ಪ್ರಕರಣದ ವಿಚಾರಣೆಯಿಂದ ಸಾಧ್ಯವಾಗದ ಸಂದರ್ಭದಲ್ಲಿ ಉಪ ಲೋಕಾಯುಕ್ತರಿಗೆ ವರ್ಗಾವಣೆಯಾಗುತ್ತದೆ ಎಂದರು.

ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್, ಕಾಂಗ್ರೆಸ್ ಸದಸ್ಯ ಆರ್. ರಮೇಶ್‍ ಕುಮಾರ್ ಅವರು, ಲೋಕಾಯುಕ್ತಕ್ಕೆ ಹಲ್ಲಿಲ್ಲದಂತಾಗಿದೆ. ಉಪಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡುವುದರಿಂದ ಏನು ಉಪಯೋಗ. ಇಂತಹ ನಿರುಪಯುಕ್ತ ಶಾಸನಗಳನ್ನು ಮಾಡುವುದರಿಂದ ಯಾರಿಗೋ ರೀ ಹ್ಯಾಬಿಲಿಟೇಷನ್ ಮಾಡಬಹುದು. ಆದರೆ, ಈಗಾಗಲೇ ಎಸಿಬಿ ರಚನೆ ಮಾಡಲಾಗಿದೆ. ಅದರಿಂದ ಏನು ಉಪಯೋಗವಾಗಿದೆ. ಹಾಗಾಗಿ ನಿಜವಾಗಲೂ ಭ್ರಷ್ಟಾಚಾರದ ವಿರುದ್ಧ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದೇ ಆದರೆ ಇಡೀ ದೇಶವೇ ಮೆಚ್ಚುವಂತ ಕಾಯ್ದೆ ಜಾರಿಗೆ ತನ್ನಿ, ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಿ ಎಂದರು.

ರಮೇಶ್ ಕುಮಾರ್ ಅವರಿಗೆ ಸಾಥ್ ನೀಡಿದ ಮಾಜಿ ಸಚಿವ ಹೆಚ್.ಡಿ‌.ರೇವಣ್ಣ, ಲೋಕಾಯುಕ್ತರಿಗೆ ಅಧಿಕಾರ ಕೊಟ್ಟೇ ಏನೂ ಆಗುತ್ತಿಲ್ಲ. ಹಲವಾರು ಕೇಸ್​ಗಳು ಹಾಗೆ ಪೆಂಡಿಂಗ್ ಇವೆ. ಇನ್ನು ಉಪಲೋಕಾಯುಕ್ತರಿಗೆ ಅಧಿಕಾರ ಕೊಟ್ಟೇನು ಉಪಯೋಗ ಎಂದರು.

ನಂತರ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಮಾತನಾಡಿ, ಲೋಕಾಯುಕ್ತದಲ್ಲಿ ಸಾವಿರಾರು ಪ್ರಕರಣಗಳು ಪೆಂಡಿಂಗ್ ಇದೆ. ಆದರೆ ಕಾಲ‌ಮಿತಿಯಲ್ಲಿ ಪ್ರಕರಣಗಳು ಇತ್ಯರ್ಥವಾಗಬೇಕು. ಅದರ ಬಗ್ಗೆ ಆಲೋಚನೆ ಮಾಡಿ ಎಂದು ಸಲಹೆ ನೀಡಿದರು. ಇದೇ ವೇಳೆಗ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಲೋಕಾಯುಕ್ತರಿಗೆ ಬರೆಯುತ್ತೇನೆ ಎಂದರೆ ಬರ್ಕೋ ಹೋಗು ಎಂದು ಹಳ್ಳಿ ಜನ ಹೇಳುವ ಮಟ್ಟಿಗೆ ಲೋಕಾಯುಕ್ತ ಪರಿಸ್ಥಿತಿ ಇದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಬಿಟ್ಟರೆ ಉಳಿದೆಲ್ಲ ಸಿಬ್ಬಂದಿ ಸರ್ಕಾರದ ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿರುವವರೇ ಅವರು ಇಲ್ಲಿದ್ದಾಗ ನಮ್ಮ ಜತೆ ಜಟಾಪಟಿ ಮಾಡಿಕೊಂಡಿರುತ್ತಾರೆ. ಅವರೇ ಲೋಕಾಯುಕ್ತಕ್ಕೆ ಹೋದ ತಕ್ಷಣ ನಮ್ಮ ಮೇಲೆ ಸೇಡಿಗೆ ಬೀಳುತ್ತಾರೆ ಎಂದರು.

ಮತ್ತೆ ರಮೇಶ್ ಕುಮಾರ್ ಮಾತನಾಡಿ, ಈಗ ಭ್ರಷ್ಟರು ಧೈರ್ಯವಾಗಿ ಓಡಾಡುವಂತೆ ನಾವು ಓಡಾಡಲು ಆಗುತ್ತಿಲ್ಲ. ಒಂದು ಕಾಲಕ್ಕೆ ಭ್ರಷ್ಟ ಅಧಿಕಾರಿಗಳು ಬಚ್ಚಿಟ್ಟುಕೊಳ್ಳುತ್ತಿದ್ದರು‌. ಈಗ ಪ್ರಾಮಾಣಿಕರೇ ಬಚ್ಚಿಟ್ಟುಕೊಳ್ಳುವಂತಾಗಿದೆ ಎಂದರು.

ಜೆಡಿಎಸ್ ಶಾಸಕ ಎ.ಟಿ‌.ರಾಮಸ್ವಾಮಿ.‌ ಮಾತನಾಡಿ, ನಾವು ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಮಾಡಿದಂತೆ ಲೋಕಾಯುಕ್ತರು ಮತ್ತು ಅವರ ಸಿಬ್ಬಂದಿಯೂ ಆಸ್ತಿ ವಿವರ ಘೋಷಿಸಿ, ಅದನ್ನು ಬಹಿರಂಗಪಡಿಸುವಂತೆ ಮಾಡಿ ಎಂದು ಸಲಹೆ ನೀಡಿದರು. ಚರ್ಚೆಯ ನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತಕ್ಕೆ ಹಾಕಿದಾಗ ದ್ವನಿ ಮತದ ಮೂಲಕ ಈ ವಿಧೇಯಕ ಅನುಮೋದನೆ ಪಡೆಯಿತು.

ABOUT THE AUTHOR

...view details