ಬೆಂಗಳೂರು:ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನದ ಇಂದಿನಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಉಭಯ ಸದನಗಳಲ್ಲಿ ಆದ್ಯತೆ ಮೇರೆ ಪಕ್ಷ ಶಾಸಕರು ಪ್ರಸ್ತಾಪಿಸಬೇಕಾಗಿರುವ ವಿಚಾರಗಳು, ಸದನದ ಒಳ ಹೊರಗೆ ಪಕ್ಷದ ಹೋರಾಟ, ಮುಂಬರುವ ಚುನಾವಣೆಗಳ ಸಿದ್ಧತೆ, ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂಗಾರು ಮಳೆ ಆರ್ಭಟದಿಂದ ರಾಜ್ಯದಲ್ಲಿ ಉಂಟಾಗಿರುವ ಅನಾಹುತ, ಜನರು ಎದುರಿಸುತ್ತಿರುವ ಸಂಕಷ್ಟ, ಬೆಳೆ ಹಾನಿ, ರಸ್ತೆ, ಸೇತುವೆ ಹಾಳಾಗಿರುವುದು, ಮನೆ ಹಾಗೂ ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ ಮೊದಲಾದ ವಿಚಾರಗಳನ್ನು ಆದ್ಯತೆ ಮೇಲೆ ಪ್ರಸ್ತಾಪಿಸಲು ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಗಳಿವೆ.