ಬೆಂಗಳೂರು:ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಲು ಒಂದು 'ಒಂದು ರಾಷ್ಟ್ರ, ಒಂದು ಚುನಾವಣೆ' ಪದ್ಧತಿಯನ್ನು ಜಾರಿಗೊಳಿಸಲು ಬಿಜೆಪಿ ಬಯಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಭಾರಿ ಗದ್ದಲವೆಬ್ಬಿಸಿದ ಪರಿಣಾಮವಾಗಿ ವಿಧಾನಸಭೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಭಾರಿ ಗದ್ದಲ.. 'ಒಂದು ರಾಷ್ಟ್ರ,ಒಂದು ಚುನಾವಣೆ' ವಿಷಯವಾಗಿ ಚರ್ಚಿಸಲು ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡಲು ಮುಂದಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ಸದನದಲ್ಲಿ ಯಾವುದೇ ವಿಷಯ ಪ್ರಸ್ತಾಪಿಸಲು ನಿಯಮಾವಳಿ ಇರಬೇಕು. ಅದರೆ ಈ ವಿಷಯವನ್ನು ಯಾವ ನಿಯಮಾವಳಿಗಳಡಿ ತರುತ್ತಿದ್ದೀರಿ ಎಂದು ಪ್ರಶ್ನಿಸಿದರು. ಯಾವ ನಿಯಮಾವಳಿಗಳ ಅಡಿಯಲ್ಲೂ ಈ ವಿಷಯ ತರಲು ಸಾಧ್ಯವಿಲ್ಲ. ಹೀಗಾಗಿ ಇದರ ಪ್ರಸ್ತಾಪವೇ ಬೇಡ ಎಂದರು.
ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯೆ ಪ್ರವೇಶಿಸಿ, ಈ ಹಿಂದೆ ಸಂವಿಧಾನದ ಕುರಿತು ಚರ್ಚಿಸಲು 363ನೇ ನಿಯಮಾವಳಿಯನ್ನು ಬಳಸಿ ಅವಕಾಶ ನೀಡಲಾಗಿತ್ತು. ಈಗಲೂ ಅದೇ ನಿಯಮಾವಳಿಯಡಿ ಚರ್ಚೆಗೆ ಅವಕಾಶ ನೀಡುತ್ತಿರುವುದಾಗಿ ಹೇಳಿದರು. ನಿಯಮಾವಳಿ 363 ರಡಿಯಲ್ಲಿ ನನಗಿರುವ ವಿವೇಚನಾಧಿಕಾರವನ್ನು ಬಳಸಿ ಚರ್ಚೆಗೆ ಅವಕಾಶ ಕೊಡಬಹುದು ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಮಾತನಾಡಿ, ವಿವೇಚನಾಧಿಕಾರ ಇದೆ ಎಂದು ಎಲ್ಲ ವಿಷಯಗಳ ಬಗ್ಗೆ ಮಾತನಾಡಲಾಗದು. ತುರ್ತು ಸಂದರ್ಭಗಳು ಎದುರಾದಾಗ ಚರ್ಚೆಗೆ ಈ ನಿಯಮಾವಳಿಯ ನೆರವು ಪಡೆಯಬಹುದೇ ಹೊರತು ಒಂದು ಸಿದ್ಧಾಂತ, ಒಂದು ಅಜೆಂಡಾ ಇಟ್ಟುಕೊಂಡ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ರಮೇಶ್ ಕುಮಾರ್ ಅವರ ಮಾತನ್ನು ಸಭಾಧ್ಯಕ್ಷರು ಒಪ್ಪದೆ ಹೋದಾಗ ಬಿಜೆಪಿ ಸದಸ್ಯರು ಎದ್ದು ನಿಂತು ರಮೇಶ್ ಕುಮಾರ್ ಅವರ ಮಾತನ್ನು ವಿರೋಧಿಸತೊಡಗಿದರು. ಆಗ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ಸದಸ್ಯರೂ ಏರಿದ ಧ್ವನಿಯಲ್ಲಿ ಕೂಗಾಡತೊಡಗಿದಾಗ ಸಭೆಯಲ್ಲಿ ಯಾರ ಮಾತು ಯಾರಿಗೂ ಕೇಳದ ಸ್ಥಿತಿ ಸೃಷ್ಟಿಯಾಯಿತು. ಇದರ ನಡುವೆಯೇ ಒಂದು ರಾಷ್ಟ್ರ ಒಂದು ಚುನಾವಣೆಯ ಅಗತ್ಯದ ಬಗ್ಗೆ ಸಭಾಧ್ಯಕ್ಷರು ವಿವರವಾಗಿ ಪ್ರಸ್ತಾಪಿಸತೊಡಗಿದರು. ಆದರೆ ಇದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದು ಧರಣಿ ನಡೆಸತೊಡಗಿದರು.
ಈ ಪ್ರಸ್ತಾಪದ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ಅವರು ಧಿಕ್ಕಾರದ ಘೋಷಣೆ ಮೊಳಗಿಸುತ್ತಿದ್ದರೆ, ಸಭಾಧ್ಯಕ್ಷರು ಒಂದು ರಾಷ್ಟ್ರ ಒಂದು ಚುನಾವಣೆಯ ಅಗತ್ಯದ ಬಗ್ಗೆ ವಿವರಿಸುತ್ತಿದ್ದರು. ತಮ್ಮ ವಿವರಣೆ ಮುಗಿದ ನಂತರ ಕಾಂಗ್ರೆಸ್ ಸದಸ್ಯರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ನಿಮ್ಮೆಲ್ಲರ ಒಪ್ಪಿಗೆ ಪಡೆದೆ ಈ ಚರ್ಚೆಗೆ ಅವಕಾಶ ನೀಡುವ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದರು.
ನೀವು ಕೂಡಾ ನಿಮ್ಮ ಪಕ್ಷದ ವತಿಯಿಂದ 19 ಮಂದಿಯ ಪಟ್ಟಿ ಕಳುಹಿಸಿ ವಿಷಯದ ಬಗ್ಗೆ ಇಷ್ಟು ಮಂದಿ ಮಾತನಾಡುತ್ತಾರೆ ಎಂದಿದ್ದಿರಿ. ಆದರೆ ಇವತ್ತು ಏಕಾಏಕಿ ನಿರ್ಧಾರ ಬದಲಿಸಿ ವಿರೋಧ ವ್ಯಕ್ತಪಡಿಸುತ್ತಿರುವುದು ಸೂಕ್ತ ಕ್ರಮವಲ್ಲ ಎಂದಾಗ ಕಾಂಗ್ರೆಸ್ ಸದಸ್ಯರು ಮತ್ತೆ ಘೋಷಣೆ ಮೊಳಗಿಸತೊಡಗಿದರು.
ಈ ವಿಷಯದ ಬಗೆಗಿನ ಚರ್ಚೆ ಅನಿವಾರ್ಯ ಎಂದು ಮುಖ್ಯಮಂತ್ರಿಗಳು ಹೇಳಿದರೆ ಭವಿಷ್ಯದ ದೇಶಕ್ಕಾಗಿ ಒಂದು ರಾಷ್ಟ್ರ ಒಂದು ಚುನಾವಣೆ ಅಗತ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಗದ್ದಲ ಮುಂದುವರೆಸಿದ ಹಿನ್ನೆಲೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಕೆಲಕಾಲ ಮುಂದೂಡಿದರು.
ಓದಿ:ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲ: ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್