ಬೆಂಗಳೂರು:5ನೇ ದಿನಕ್ಕೆ ಕಾಲಿಟ್ಟ ವಿಧಾನಸಭೆ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದ್ದು, ಇದರಲ್ಲಿ ಪಾಲ್ಗೊಂಡು ಸರ್ಕಾರದ ಲೋಪವನ್ನು ಎತ್ತಿ ಹಿಡಿಯಲು ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.
ಇಂದು ಉಭಯ ಸದನಗಳಲ್ಲಿ ಬಜೆಟ್ ಭಾಷಣದ ಮೇಲೆ ಚರ್ಚೆ ಆರಂಭವಾಗಲಿದೆ. ಚರ್ಚೆ ವೇಳೆ ಹಲವು ವಿಚಾರ ಪ್ರಸ್ತಾಪ ಮಾಡುವ ಮೂಲಕ ರಾಜ್ಯದ ಜ್ವಲಂತ ಸಮಸ್ಯೆ ಬಿಚ್ಚಿಡಲು ಕಾಂಗ್ರೆಸ್ ನಿರ್ಧರಿಸಿದೆ. ಬಜೆಟ್ನಲ್ಲಿ ಯಾವುದಕ್ಕೂ ಸರಿಯಾಗಿ ಒತ್ತು ನೀಡಿಲ್ಲ. ರೈತರು, ಕಾರ್ಮಿಕರಿಗೆ ನ್ಯಾಯ ಕೊಟ್ಟಿಲ್ಲ. ಸಾಲ ಮಾಡಿ ಬಜೆಟ್ ಮಂಡಿಸುವ ಅವಶ್ಯಕತೆಯಿತ್ತೇ? ಸಾಲ ಮಾಡಿ ರಾಜ್ಯವನ್ನ ದಿವಾಳಿಯತ್ತ ಸಾಗಿಸುತ್ತಿದ್ದೀರಿ ಎಂಬ ಆರೋಪವನ್ನ ಮುಂದಿಟ್ಟು ಸರ್ಕಾರಕ್ಕೆ ಮುಜುಗರ ತರಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಸಮರ್ಥವಾಗಿ ಚರ್ಚಿಸುವ ಮೂಲಕ ಸರ್ಕಾರದ ಲೋಪವನ್ನು ಎತ್ತಿ ಹಿಡಿದು ವಿಧಾನಸಭೆ ವಿಧಾನ ಪರಿಷತ್ನಲ್ಲಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಮಾ.8ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ವಿಚಾರ ಗಂಭೀರವಾಗಿ ಚರ್ಚೆಯಾಗಿದೆ. ಅಲ್ಲಿಯೇ ಬಹುತೇಕ ವಿಚಾರ ಅಂತಿಮವಾಗಿದ್ದು ಇದಾದ ಬಳಿಕ ನಿನ್ನೆ ಸಿದ್ದರಾಮಯ್ಯ ಪಕ್ಷದ ಶಾಸಕರು ವಿಧಾನಪರಿಷತ್ ಸದಸ್ಯರಿಗೆ ಪಕ್ಷದ ಸೂಚನೆಯನ್ನು ರವಾನೆ ಮಾಡಿದ್ದಾರೆ ಎನ್ನಲಾಗ್ತಿದೆ.