ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್ಎಚ್ಎಂ) ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರ ಬಹುದಿನಗಳ ಬೇಡಿಕೆಯಂತೆ ಶೇ.15ರಷ್ಟು ವೇತನ ಒಂದೆರಡು ದಿನಗಳಲ್ಲಿ ಹೆಚ್ಚಳವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯೆ ಪೂರ್ಣಿಮಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವೇತನ ಪರಿಷ್ಕರಣೆ ಸಂಬಂಧ ಚರ್ಚಿಸಲಾಗಿದ್ದು, ಅವರು ಇದಕ್ಕೆ ಸಮ್ಮತಿಸಿದ್ದಾರೆ. ಈ ಸಂಬಂಧ ಹಣಕಾಸು ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಆದೇಶ ಪ್ರಕಟವಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದಿಲ್ಲ. 21,542 ಗುತ್ತಿಗೆ ಆಧಾರಿತ ನೌಕರರು ಹಾಗೂ 3494 ಹೊರಗುತ್ತಿಗೆ ಆಧಾರಿತ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮವನ್ನ ರಾಜ್ಯ ಆರೋಗ್ಯ ಸೊಸೈಟಿ ಮತ್ತು ಜಿಲ್ಲಾ ಆರೋಗ ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಪಾಲನ್ನು ರಾಜ್ಯ ಸರ್ಕಾರವು ರಾಜ್ಯ ಆರೋಗ್ಯ ಸೊಸೈಟಿಯ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯ ಆರೋಗ್ಯ ಸೊಸೈಟಿ ಮೂಲಕ ಜಿಲ್ಲಾ ಸೊಸೈಟಿಗೆ ಬಿಡುಗಡೆ ಮಾಡಿ ಜಿಲ್ಲಾ ಆರೋಗ್ಯ ಸೊಸೈಟಿಗಳ ಮೂಲಕ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. ಇನ್ನು ಹೊರಗುತ್ತಿಗೆ ನೌಕರರಿಗೂ ಇದೇ ರೀತಿ ಜಿಲ್ಲಾ ಸೊಸೈಟಿ ಮೂಲಕ ವೇತನ ನೀಡಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಪರವಾಗಿ ಡಾ.ಅಜಯ್ ಧರ್ಮಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಲು ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಅವಕಾಶವಿಲ್ಲ ಎಂದರು.
ಹೆಚ್ಚಿನ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು:ಕಳೆದ ಮೂರು ವರ್ಷಗಳಲ್ಲಿ ಹಾಸಿಗೆ ಬಳಕೆ ಪ್ರಮಾಣ ಶೇ.37 ರಷ್ಟಿದೆ. ನಿಯಮಗಳ ಪ್ರಕಾರ ಶೇ.70 ಕ್ಕಿಂತ ಹೆಚ್ಚು ಇರಬೇಕು. ಕಲ್ಯಾಣ ಕರ್ನಾಟಕದ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಈ ಆಸ್ಪತ್ರೆ ಹೆಚ್ಚು ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಆಡಳಿತ ಪಕ್ಷದ ಸದಸ್ಯ ಹರತಾಳ ಹಾಲಪ್ಪ ಅವರು ವೈದ್ಯರ ವೇತನ ಹೆಚ್ಚಿಸಬೇಕು ಎಂದು ಸಚಿವ ಸುಧಾಕರ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್, ಬಿಜೆಪಿ ಸದಸ್ಯ ಕಳಕಪ್ಪ ಬಂಡಿ, ಜೆಡಿಎಸ್ ಸದಸ್ಯ ಸಾ.ರಾ. ಮಹೇಶ್ ಮತ್ತಿತರರು ದನಿಗೂಡಿಸಿದರು.
ಖಾದರ್ ಮಾತನಾಡಿ, ವೈದ್ಯರಿಗೆ ಕೆಲವೆಡೆ ರಕ್ಷಣೆ ಇಲ್ಲ. ಏಕ ವಚನದಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಮೊದಲು ಇದು ನಿಲ್ಲಬೇಕು ಎಂದು ಸಲಹೆ ಮಾಡಿದರು. ಆಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವೈದ್ಯರ ವೇತನ ಪರಿಷ್ಕರಣೆ ಸಂಬಂಧ ಪರಿಶೀಲನೆ ನಡೆಸಲು ಸೂಚಿಸಿದರು.