ಬೆಂಗಳೂರು: ಲಭ್ಯತೆ ಆಧಾರದಲ್ಲಿ ದೇವಸ್ಥಾನಗಳಿಗೆ ಸರ್ಕಾರ ಜಮೀನು ಮಂಜೂರು ಮಾಡಲಿದೆ ಎಂದು ಮುಜರಾಯಿ ಸಚಿವರ ಪರವಾಗಿ ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ದೇವಸ್ಥಾನಗಳಿಗೆ ಜಾಗ ಮಂಜೂರಾತಿ ಕುರಿತಂತೆ ಕಾಂಗ್ರೆಸ್ ಶಾಸಕ ರಾಜೇಗೌಡ ಅವರು ಸರ್ಕಾರದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರು, ರಾಜ್ಯದ ದೇವಸ್ಥಾನಗಳ ಸುಪರ್ದಿಯಲ್ಲಿರುವ ಜಮೀನುಗಳನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದರೆ ಕಾನೂನು ಪ್ರಕಾರ ಜಮೀನು ಮಂಜೂರಾತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಕೆಲ ಖಾಸಗಿ ದೇವಾಲಯಗಳು ಗೋಮಾಳ, ಅರಣ್ಯ ಭೂಮಿಯಲ್ಲಿದೆ. ಸುಪ್ರೀಂಕೋರ್ಟ್ನ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನು ಮಾಡಬೇಕಾಗುತ್ತದೆ. ಯಾವುದೇ ಜಮೀನು ಮಂಜೂರಾತಿ ಬಗ್ಗೆ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳುತ್ತದೆ. ದೇವಾಲಯಗಳ ಜಮೀನು ಮಂಜೂರಾತಿ ಬಗ್ಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಶೃಂಗೇರಿ ವಿಧಾನಸಭಾ ಕ್ಷೇತ್ರದ 5 ದೇವಸ್ಥಾನಗಳಿಗೆ ಜಮೀನುಗಳನ್ನು ಮಂಜೂರು ಮಾಡಿದೆ. ಶೃಂಗೇರಿ ತಾಲ್ಲೂಕಿನಲ್ಲಿ ಜಮೀನು ಮಂಜೂರಾತಿಯ ಪ್ರಕರಣಗಳು ಬಾಕಿ ಇಲ್ಲ ಎಂದು ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಮುಜರಾಯಿಯೇತರ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಕುರಿತಂತೆ ಅಜಯ್ ಧರ್ಮಸಿಂಗ್ ಅವರು ಧಾರ್ಮಿಕ ದತ್ತಿ ಸಚಿವರಿಗೆ ಮನವಿ ಮಾಡಿಕೊಂಡರು. ಸಚಿವ ಜೊಲ್ಲೆ ಪರವಾಗಿ ಉತ್ತರಿಸಿದ ಕಂದಾಯ ಸಚಿವರು, ಕಳೆದ ಸಾಲಿನಲ್ಲಿ ರಾಜ್ಯದ ವಿವಿಧ ದೇವಸ್ಥಾನಗಳಿಗೆ 483.05 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುವುದಾಗಿ ಸದನಕ್ಕೆ ಮಾಹಿತಿ ನೀಡಿದರು.
ಪ್ರಕರಣ ಇತ್ಯರ್ಥ ಆದ ಕೂಡಲೇ ನೇಮಕ:ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲೇ ಪಶುಸಂಗೋಪನಾ ಇಲಾಖೆಯ 400 ವೈದ್ಯರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದರು. ಮೈಸೂರು ಜಿಲ್ಲೆ ಪಿರಿಯಾ ಪಟ್ಟಣದಲ್ಲಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಜೆಡಿಎಸ್ ಶಾಸಕ ಮಹದೇವ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ನರೇಂದ್ರ ಮಾತನಾಡಿ, ಹೊಸ ಪಶು ಚಿಕಿತ್ಸಾಲಯಗಳನ್ನು ಆರಂಭಿಸುವುದರಿಂದ ಪ್ರಯೋಜನವಿಲ್ಲ. ಪಶು ಚಿಕಿತ್ಸಾಲಯಗಳಿಗೆ ವೈದ್ಯರನ್ನು ನೇಮಕ ಮಾಡಿ. ಹಲವೆಡೆ ವೈದ್ಯರೇ ಇಲ್ಲ. ನನ್ನ ಕ್ಷೇತ್ರದಲ್ಲಿ 9 ಪಶು ಚಿಕಿತ್ಸಾಲಯಗಳಿಗೆ ಒಬ್ಬ ವೈದ್ಯರಿದ್ದಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ್ದರು. ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 400 ಪಶು ವೈದ್ಯರ ನೇಮಕವಾಗಿದೆ. ಒಂದಿಬ್ಬರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಹಾಗಾಗಿ ತಡವಾಗಿದೆ. ಆದಷ್ಟು ಬೇಗ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.