ಕರ್ನಾಟಕ

karnataka

By

Published : Sep 16, 2022, 3:33 PM IST

ETV Bharat / state

ಮೂರು ತಿಂಗಳಲ್ಲಿ ಬೆಂಗಳೂರು ಭಿಕ್ಷಾಟನೆ ನಿಯಂತ್ರಣ: ಕೋಟಾ ಶ್ರೀನಿವಾಸ ಪೂಜಾರಿ

ವಿಧಾನ ಪರಿಷತ್​ ಪ್ರಶ್ನೋತ್ತರ ಕಲಾಪದಲ್ಲಿ ಮೂರು ತಿಂಗಳಿನಲ್ಲಿ ಭಿಕ್ಷಾಟನೆ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿದ್ದಾರೆ.

KN_BNG_
ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭಿಕ್ಷಾಟನೆಯನ್ನು ಎರಡು ಮೂರು ತಿಂಗಳಿನಲ್ಲಿ ನಿಯಂತ್ರಣ ಮಾಡುವ ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅ.ದೇವೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಬೆಂಗಳೂರಿನಲ್ಲಿ ಭಿಕ್ಷಾಟನೆ ನಿಯಂತ್ರಿಸುವ ಅನಿವಾರ್ಯತೆ ಇದೆ. ಯಾವುದೋ ಮಕ್ಕಳನ್ನು ಬಾಡಿಗೆಗೆ ಪಡೆದು ಅವರಿಗೆ ಮತ್ತು ಬರುವ ಔಷಧ ನೀಡಿ ಮಗುವನ್ನು ಎತ್ತಿಕೊಂಡು ಅನುಕಂಪ‌ ಗಿಟ್ಟಿಸಿಕೊಂಡು ಭಿಕ್ಷಾಟನೆ ನಡೆಸಲಾಗುತ್ತಿದೆ.

ಭಿಕ್ಷಾಟನೆ ನಂತರ ಆ ಮಗುವನ್ನು ಪೋಷಕರಿಗೆ ವಾಪಸ್ ಕೊಡುವ ಘಟನೆ ನಡೆಯುತ್ತಿದೆ. ಅವರನ್ನು ರಕ್ಷಿಸಬೇಕಿದೆ. ಅದೇ ರೀತಿ ವೃದ್ಧರನ್ನು ಬಳಸಿಕೊಂಡು ಭಿಕ್ಷಾಟನೆ ಮಾಡಲಾಗುತ್ತಿದೆ. ತೃತೀಯ ಲಿಂಗಿಗಳು ಕೂಡ ಭಿಕ್ಷಾಟನೆ ಮಾಡುತ್ತಿದ್ದು, ಕೆಲ ಕಡೆ ಅಹಿತಕರ ಘಟನೆ ನಡೆಯುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ.

ಇದರ ನಿಯಂತ್ರಣಕ್ಕಾಗಿಯೇ ಡಿಸಿಪಿ ನೇತೃತ್ವದಲ್ಲಿ 8 ಟಾಸ್ಕ್ ಫೋರ್ಸ್ ರಚಿಸಿದ್ದು, ಭಿಕ್ಷಾಟನೆ ನಿಯಂತ್ರಣಕ್ಕೆ ಯತ್ನಿಸಲಾಗುತ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಂಧನ ಮಾಡುವಂತಿಲ್ಲದ ಕಾರಣ ಕಾನೂನು ಸಚಿವರ ಜೊತೆ ಚರ್ಚಿಸಿ ಅವರ ರಕ್ಷಣೆಗೆ ಕ್ರಮ ವಹಿಸಲಾಗುತ್ತದೆ. ಎರಡು ಮೂರು ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಭಿಕ್ಷಾಟನೆ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ:ಪ್ರತಿ ಜಿಲ್ಲೆಯಲ್ಲಿಯೂ ಒಬ್ಬ ಕಾರ್ಮಿಕನ ಮಗ ಪೈಲೆಟ್ ಆಗಬೇಕು ಎನ್ನುವ ಚಿಂತನೆಯೊಂದಿಗೆ 35 ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ಕೊಡಿಸಲಾಗುತ್ತಿದೆ ಎಂದು ಕಾರ್ಮಿಕ‌ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ‌ ಅಹಮದ್ ಬದಲು ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ವೇಳೆ 4500 ವಲಸೆ ಕಾರ್ಮಿಕರಿದ್ದರು, ಅವರನ್ನು ಬಹಳ ಕಷ್ಟಪಟ್ಟು ಅವರ ಊರು ಮನೆ ಮುಟ್ಟಿಸಿದ್ದೆವು, ಈಗ ಮತ್ತೆ ಎಷ್ಟು ಜನ ವಾಪಸ್ ಬಂದಿದ್ದಾರೆ ಎಂದು ಗೊತ್ತಿಲ್ಲ. ಆದರೆ ವಲಸೆ ಕಾರ್ಮಿಕರ ಸಹಾಯಕ್ಕೆ ಹೆಲ್ಪ್ ಲೈನ್ ಮಾಡಲಾಗಿದೆ.

ಅವರಿಗೆ ರೇಷನ್ ಕಾರ್ಡ್ ನಿಂದ ಹಿಡಿದು ಎಲ್ಲ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಶಿವಮೊಗ್ಗ, ಬೆಂಗಳೂರು, ಬೆಳಗಾವಿ, ಚಾಮರಾಜನಗರ ಸೇರಿ ಏಳು ಕಡೆ ಉಚಿತ ವಸತಿ ವ್ಯವಸ್ಥೆಗೆ ಕಟ್ಟಡ ಕಟ್ಟಲಾಗಿದೆ. 750 ಕಾರ್ಮಿಕರ ಮಕ್ಕಳಿಗೆ ಐಎಎಸ್, ಐಪಿಎಸ್ ಪರೀಕ್ಷಾ ತರಬೇತಿ ನೀಡುತ್ತಿದ್ದು, 6 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಪ್ರತಿ ಜಿಲ್ಲೆಯಲ್ಲಿ ಒಬ್ಬ ಪೈಲೆಟ್ ಆಗಬೇಕು ಎನ್ನುವ ಚಿಂತನೆಯಿಂದ 35 ವಿದ್ಯಾರ್ಥಗಳಿಗೆ ಪೈಲಟ್ ತರಬೇತಿ ಕೊಡಿಸಲಾಗುತ್ತಿದೆ. ಇನ್ನು ಕಾರ್ಮಿಕರಿಗೆ ಸಂಬಂಧಿದ 3,34,000 ಅರ್ಜಿ ಬಾಕಿ ಇತ್ತು 2,98,000 ಅರ್ಜಿಗಳನ್ನು ಕಾರ್ಮಿಕ ಅದಾಲತ್ ಮೂಲಕ ವಿಲೇವಾರಿ ಮಾಡಲಾಗಿದೆ ಎಂದರು.

ಅಗತ್ಯಕ್ಕಿಂತ ಹೆಚ್ಚಿನ ಉತ್ತರ ನೀಡುತ್ತಿದ್ದಾರೆ, ಇದು ಬಜೆಟ್ ಭಾಷಣದಂತಿದೆ ಎಂದು ಪ್ರಶ್ನೆ ಕೇಳಿದ ಗೋವಿಂದರಾಜ್ ಹಾಸ್ಯ ಚಟಾಕಿ ಹಾರಿಸಿದರು, ಇನ್ಯಾರು ಕಾರ್ಮಿಕ ಸಚಿವರಿಗೆ ಪ್ರಶ್ನೆ ಕೇಳದಂತೆ ಎಲ್ಲ ಉತ್ತರ ನೀಡುತ್ತಿದ್ದಾರೆ ಎಂದು ಕೆಲ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಬದ್ಧ, ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಶ್ರೀರಾಮುಲು

ABOUT THE AUTHOR

...view details