ಬೆಂಗಳೂರು: ಯಾವುದೇ ಕಾರಣಕ್ಕೂ ಬೀದರ್ ಜಿಲ್ಲೆ ಕಾರಂಜಾ ಮುಳುಗಡೆ ಪ್ರದೇಶದ ರೈತರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾರಂಜಾ ಯೋಜನೆಗೆ 1978-86 ವರೆಗೂ ಒಟ್ಟು 69 ಕೋಟಿ ಪರಿಹಾರ ನೀಡಲಾಗಿದೆ. ಅದರಲ್ಲಿ 45 ಕೋಟಿ ಹಣವನ್ನು ರೆಗ್ಯುಲರ್ ಅವಾರ್ಡ್ ರೀತಿ ಕೊಡಲಾಗಿದ್ದು 21 ಕೋಟಿ ಹಣವನ್ನು ಹೆಚ್ಚುವರಿಯಾಗಿ ಕೋರ್ಟ್ಗೆ ಹೋಗಿ ಸಂತ್ರಸ್ತರು ಪಡೆದುಕೊಂಡರು, ಕೋರ್ಟ್ಗೆ ಹೋಗದವರೂ ಕೂಡ ಮೂರು ತಿಂಗಳಿನಲ್ಲಿ ಅರ್ಜಿ ಹಾಕಿದರೆ, ಅವರಿಗೂ ಹೆಚ್ಚುವರಿ ಪರಿಹಾರ ಕೊಡಬೇಕು. ಆದರೆ ಈಗ 30 ವರ್ಷದ ನಂತರ ಧರಣಿ ಕುಳಿತು ಕೇಳಿದರೆ ಪರಿಹಾರ ಕೊಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
2014ರಲ್ಲಿ ಸಂಪುಟದಲ್ಲಿ ಈ ಕುರಿತು ನಿರ್ಣಯವಾಗಿದ್ದು, ಹೆಚ್ಚಿನ ಪರಿಹಾರ ಕೊಡಬಾರದು ಎಂದು ನಿರ್ಧರಿಸಲಾಗಿದೆ. ಹಾಗಾಗಿ ಯುಕೆಪಿ ಮಾದರಿಯಲ್ಲಿ ಇವರಿಗೆ ಕೊಡಲು ಸಾಧ್ಯವಿಲ್ಲ. ಯುಕೆಪಿಗೆ ವಿಶ್ವಬ್ಯಾಂಕ್ ನಿಂದ ನೆರವು ಪಡೆದಿದ್ದೇವೆ ಅವರ ಷರತ್ತುಗಳೇ ಇವೆ, ಹಾಗಾಗಿ ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸಲಾಗಲ್ಲ, ಅದರಂತೆ ಒಂದು ರೂಪಾಯಿಯೂ ಪರಿಹಾರ ಕೊಡಲು ಸಾಧ್ಯವಿಲ್ಲ, ಈಗ ಕೊಟ್ಟರೆ ಇಡೀ ದೇಶದಲ್ಲಿ ಎಲ್ಲರೂ ಪರಿಹಾರಕ್ಕೆ ಎದ್ದು ನಿಲ್ಲುತ್ತಾರೆ ಹಾಗಾಗಿ ಇಂತಹ ಪ್ರಸ್ತಾಪ ತರದಂತೆ ಸದಸ್ಯರಿಗೆ ಮನವಿ ಮಾಡಿದರು.
ಹೈಕೋರ್ಟ್ ತಿರಸ್ಕಾರ..ಈಗೇನಿದ್ದರೂ ಅಂತಾರಾಷ್ಟ್ರೀಯ ಕೋರ್ಟ್ಗೆ ಹೋಗಬೇಕಷ್ಟೇ:ಹೈಕೋರ್ಟ್ ಕೂಡ ಸಂತ್ರಸ್ತರ ಮನವಿ ತಿರಸ್ಕಾರ ಮಾಡಿದೆ ಈಗೇನಿದ್ದರೂ ಅಂತಾರಾಷ್ಟ್ರೀಯ ಕೋರ್ಟ್ಗೆ ಹೋಗಬೇಕು ಅಷ್ಟೆ ಎಂದರು. ಸರ್ಕಾರದ ಉತ್ತರ ಖಂಡಿಸಿ ಬಾವಿಗಿಳಿದ ಅರಳಿ, ಸದಸ್ಯರ ಮನವಿ ಮೇರೆಗೆ ವಾಪಸ್ ಬಂದರು.
ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಿನ್ನೆ ನಿಮ್ಮ ಭಾಗದ ರೈತರು, ಆ ಭಾಗದ ನಾಯಕರು ಬಂದಿದ್ದರು, ಈಗ ಪರಿಹಾರ ನೀಡುವುದು ಕಷ್ಟ. ಆದರೂ ಅವರ ದಾಖಲೆ ಕೇಳಿದ್ದೇನೆ, ಬೇರೆ ರೀತಿಯಲ್ಲಿ ಏನಾದರೂ ಮಾಡಲು ಪ್ರಯತ್ನಿಸಲಾಗುತ್ತದೆ, ಕಾನೂನು ಮೀರಿ ಏನಾದರೂ ಮಾಡಬೇಕು, ಸರ್ಕಾರದಿಂದ ಮಾನವೀಯತೆಯಿಂದ ಏನಾದರೂ ಮಾಡಲು ಪ್ರಯತ್ನ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಏತನೀರಾವರಿಗೆ ಅಡ್ಡಿಯಾದ ಅಧಿಕಾರಿಗಳ ವಿರುದ್ಧ ಕ್ರಮ: ಶಿವಮೊಗ್ಗ ತಾಲ್ಲೂಕು ಹೊಳಲೂರು ಗ್ರಾಮದ ಹತ್ತಿರ ಹರಿಯುವ ತುಂಗಾ ನದಿಯಿಂದ ನೀರನ್ನೆತ್ತಿ ನಾರಾಯಣ ಕೆರೆ, ಸೀಗೆಹಳ್ಳಿ, ಬೂದಿಗೆರೆ, ಸುತ್ತುಕೋಟೆ ಕೆರೆಗಳಿಗೆ ನೀರು ಒದಗಿಸುವ ಏತ ನೀರಾವರಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ನಮ್ಮ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.