ಬೆಂಗಳೂರು: ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡಿತು. ಕರ್ನಾಟಕ ವಿಧಾನ ಪರಿಷತ್ತಿನಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2022 ನೇ ಸಾಲಿನ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಪುನರ್ ಪರ್ಯಾಲೋಚಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ಇಂದು ಮಂಡನೆ ಮಾಡಿದರು.
ವಿಧಾನಪರಿಷತ್ನಲ್ಲಿ ಸಾಕಷ್ಟು ಚರ್ಚೆ ಆಗಿದೆ. ಇದಕ್ಕೆ ಅನುಮೋದನೆ ನೀಡಬೇಕೆಂದು ಸಚಿವರು ಮನವಿ ಮಾಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಈ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧ್ವನಿ ಮತದ ಮೂಲಕ ಈ ಕಾಯ್ದೆಗೆ ಅಂಗೀಕಾರ ನೀಡಿದರು. ಅದೇ ರೀತಿ 2022 ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು. ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ್ನಾರಾಯಣ್ ಅವರು, ಈ ವಿಧೇಯಕವನ್ನು ಮಂಡಿಸಿ ಅನುಮೋದನೆಗೆ ಮನವಿ ಮಾಡಿದರು.
ಸ್ಪೀಕರ್ ಬೇಸರ : ಇದಕ್ಕೂ ಮುನ್ನ ರಾಜ್ಯದ ವಿಶ್ವವಿದ್ಯಾಲಯಗಳ ಶಿಕ್ಷಣ ಗುಣಮಟ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಅವರು, ವಿಶ್ವವಿದ್ಯಾಲಯದಲ್ಲಿ ಇರಬೇಕಾದ ಗುಣಮಟ್ಟ ಇಲ್ಲ. ಶಿಕ್ಷಣ ಸಂಸ್ಥೆಗಳ ಮೇಲೆ ನನಗೆ ಅಸಮಾಧಾನ ಇದೆ ಎಂದರು.
ನನಗೆ ಬರುವ ದೂರು, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ನೋಡಿದರೆ ಆಶ್ಚರ್ಯ ಆಗುತ್ತದೆ. ನಾನು ಬಹಳ ಬೇಸರದಲ್ಲಿ ಇದನ್ನು ಹೇಳ್ತಿದ್ದೇನೆ. ಗುಣಮಟ್ಟದ ಶಿಕ್ಷಣದ ಬಗ್ಗೆ ನೀವು ಸೂಕ್ತ ನಿರ್ಧಾರ ಮಾಡಬೇಕು. ಈ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿಗಳ ಜೊತೆ ಮಾತಾಡಿ ಎಂದು ಉನ್ನತ ಶಿಕ್ಷಣ ಸಚಿವರಿಗೆ ಖಾರವಾಗಿಯೇ ಸಲಹೆ ನೀಡಿದರು.