ಬೆಂಗಳೂರು:ಕುಟುಂಬ ರಾಜಕೀಯ ಪಕ್ಷ ಎಂಬ ಟೀಕೆಗೆ ಒಳಗಾಗಿರುವ ಜೆಡಿಎಸ್ ಈ ಬಾರಿ ಚುನಾವಣೆ ಗೆಲುವಿಗೆ ಈಗಾಗಲೇ ಸಿದ್ದತೆ ನಡೆಸಿದೆ. ಪಂಚರತ್ನ ರಥಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜನರ ಬಳಿ ಸಾಗುತ್ತಿದೆ. ಮತ್ತೊಂದೆಡೆ ಪಕ್ಷದಲ್ಲಿ ಚುನಾವಣಾ ಆಕಾಂಕ್ಷಿಗಳ ಪಟ್ಟಿ ಕೂಡ ಹೆಚ್ಚುತ್ತಿದ್ದು, ಈ ಬಾರಿ ಪಕ್ಷ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದೆ.
ಈ ಗೆಲುವಿನ ಅಭ್ಯರ್ಥಿಗಳಿಗಾಗಿ ಪಕ್ಷವೊಂದು ಮೊದಲ ಬಾರಿ ಎಂಬಂತೆ ಕಾರ್ಪೋರೇಟ್ ಮಾದರಿ ಸಂದರ್ಶನಕ್ಕೆ ಮುಂದಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಕುರಿತು ಸಂಪೂರ್ಣ ಚರ್ಚೆ ಪರಿಶೀಲನೆ ನಡೆಸಲಿದೆ. ಈ ಸಂದರ್ಶನದಲ್ಲಿ ಪಾಸ್ ಆದ ಅಭ್ಯರ್ಥಿಗಳ ಪಟ್ಟಿ ಹೈ ಕಮಾಂಡ್ ತಲುಪಲಿದ್ದು, ಬಳಿಕ ಇವರಿಗೆ ಟಿಕೆಟ್ ಘೋಷಣೆ ನಡೆಯಲಿದೆ. ಇದಕ್ಕಾಗಿ ಪಕ್ಷ ಅಭ್ಯರ್ಥಿಗಳ ಸಂದರ್ಶನಕ್ಕೆ ಪಕ್ಷ ವಿದ್ಯುಕ್ತವಾಗಿ ಚಾಲನೆ ನೀಡಿದೆ.
ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಸಂದರ್ಶನದಲ್ಲಿ ಹಾಲಿ ಶಾಸಕರನ್ನು ಹೊರತುಪಡಿಸಿ 126 ಮಂದಿಗೆ ಕರೆ ನೀಡಲಾಗಿದ್ದು, ನಿನ್ನೆ 38 ಮಂದಿ ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದಾರೆ. ಸಂದರ್ಶನಕ್ಕೆ ಬಂದವರ ವೈಯಕ್ತಿಕ ವಿವರವನ್ನು ಸಂಗ್ರಹಿಸಲಾಗಿದ್ದು, ಯಾವ ಕ್ಷೇತ್ರಗಳಲ್ಲಿ ಅವರು ಟಿಕೆಟ್ ಕೇಳಿದ್ದಾರೋ ಅಲ್ಲಿ ಸ್ಪರ್ಧಿಸಲು ಅವರಿಗೆ ಇರುವ ಅನುಕೂಲಗಳೇನು? ಅನಾನುಕೂಲಗಳೇನು? ಎಂಬುದು ಸೇರಿದಂತೆ ಅತಿಸೂಕ್ಷ್ಮ ಮಾಹಿತಿಗಳು ಅದರಲ್ಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳ ಸಂದರ್ಶನದಲ್ಲಿ ಆಕಾಂಕ್ಷಿಗೆ ಇರುವ ಅನುಕೂಲಗಳೇನು? ಸಮಸ್ಯೆ ಇದ್ದರೆ ಯಾವ ಭಾಗದಿಂದ ಸಮಸ್ಯೆ ಎದುರಾಗಬಹುದು ಅನ್ನುವುದನ್ನು ಪರಿಶೀಲಿಸಿ ಅದಕ್ಕೆ ಪರಿಹಾರವಿದೆಯೇ, ಇದ್ದರೆ ಏನು? ಪರಿಹಾರವೇ ಇಲ್ಲದಿದ್ದರೆ ಏನು ಅನ್ನುವವರೆಗೆ ಈ ಸಂದರ್ಶನದಲ್ಲಿ ಪ್ರಶ್ನೆಗಳು ಕರಾರುವಾಕ್ಕಾಗಿದೆ. ಈ ಸಂದರ್ಶನ ನಡೆಸುವ ಜವಾಬ್ದಾರಿಯನ್ನು ಐದು ತಂಡಗಳಿಗೆ ವಹಿಸಲಾಗಿದ್ದು, ದೆಹಲಿ, ಹೈದ್ರಾಬಾದ್, ಮುಂಬಯಿ, ಬೆಂಗಳೂರು ಸೇರಿದಂತೆ ಐದು ಭಾಗಗಳ ತಂಡಗಳು ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸಿದೆ ಎಂದು ತಿಳಿದು ಬಂದಿದೆ.