ಕರ್ನಾಟಕ

karnataka

ETV Bharat / state

ಜೆಡಿಎಸ್​​ಗೆ ಬೆಂಬಲ ಘೋಷಿಸಿದ ತೆಲಂಗಾಣ ಸಿಎಂ: ಗಡಿ ಭಾಗದಲ್ಲಿ ಅನುಕೂಲವಾಗುವುದೇ?

ಜೆಡಿಎಸ್​​ಗೆ ಬೆಂಬಲ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ನೇತೃತ್ವದ ಭಾರತ ರಾಷ್ಟ್ರ ಸಮಿತಿ ಘೋಷಿಸಿದೆ.

Telangana CM support to JDS
ಜೆಡಿಎಸ್​​ಗೆ ಬೆಂಬಲ ಘೋಷಿಸಿದ ತೆಲಂಗಾಣ ಸಿಎಂ

By

Published : Apr 17, 2023, 2:31 PM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಒಂದು ಕಡೆ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಪರವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಬೆಂಬಲ ಘೋಷಿಸಿದ್ದಾರೆ. ಇದರಿಂದ ರಾಜ್ಯದ ಗಡಿ ಭಾಗದಲ್ಲಿರುವ ತೆಲುಗು ಭಾಷಿಕರನ್ನು ತನ್ನತ್ತ ಸೆಳೆಯಲು ಜೆಡಿಎಸ್ ತಂತ್ರಗಾರಿಕೆ ನಡೆಸಿದೆ.

ಕಳೆದ ಮಾರ್ಚ್​ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​​ಎಸ್) ಪಕ್ಷವನ್ನು ಭಾರತ ರಾಷ್ಟ್ರೀಯ ಸಮಿತಿ (ಬಿಆರ್​ಎಸ್) ಎಂದು ಮರು ನಾಮಕರಣ ಮಾಡಿ ರಾಷ್ಟ್ರೀಯ ಪಕ್ಷವಾಗಿ ಘೋಷಣೆ ಮಾಡಿತ್ತು. ಜೆಡಿಎಸ್​​ಗೆ ಬೆಂಬಲ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ನೇತೃತ್ವದ ಭಾರತ ರಾಷ್ಟ್ರ ಸಮಿತಿ ಘೋಷಿಸಿದೆ. ಜೆಡಿಎಸ್​​ನ್ನು ತನ್ನ ಸಹಜ ಮಿತ್ರ ಎಂದು ಹೇಳಿರುವ ಬಿಆರ್​​ಎಸ್, ಮೈತ್ರಿಯ ಸ್ವರೂಪದ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದೆ.

ಕಳೆದ ತಿಂಗಳು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಹೈದರಾಬಾದ್​​ಗೆ ತೆರಳಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದದ್ದರು. ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುವ ಉತ್ಸಾಹದಲ್ಲಿರುವ ಬಿಆರ್​​ಎಸ್, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಕೆಲವು ಭಾಗಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿತ್ತು. ತೆಲಂಗಾಣಕ್ಕೆ ಹೊಂದಿಕೊಂಡಂತಿರುವ ಕರ್ನಾಟಕದ ಗಡಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಸಿಆರ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ, ಈ ಕಾರ್ಯತಂತ್ರದಿಂದ ಹಿಂದೆ ಸರಿದಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​​ಗೆ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ ಗಡಿ ಭಾಗದ ಜಿಲ್ಲೆಗಳಲ್ಲಿ ಕೆಸಿಆರ್ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ತನ್ನ ಪಕ್ಷ ವಿಸ್ತರಣೆಯ ಕಾರ್ಯತಂತ್ರದ ಭಾಗವಾಗಿ ಕಲ್ಯಾಣ ಕರ್ನಾಟಕದಲ್ಲಿ (ಹಿಂದೆ ಕರೆಯುತ್ತಿದ್ದ ಹೈದರಾಬಾದ್-ಕರ್ನಾಟಕ) ತೆಲಂಗಾಣದ ಗಡಿಯಲ್ಲಿರುವ ಕೆಲವು ಜಿಲ್ಲೆಗಳಲ್ಲಿ ತನ್ನ ಹಿಡಿತ ಇಟ್ಟುಕೊಂಡಿದೆ. ಹಾಗಾಗಿ, ಜೆಡಿಎಸ್​​ಗೆ ಬೆಂಬಲ ನೀಡಿರುವ ಬಿಆರ್​​ಎಸ್ ನಿಂದ ಜೆಡಿಎಸ್​​ಗೆ ಎಷ್ಟರಮಟ್ಟಿಗೆ ಲಾಭವಾಗುತ್ತದೆ ಎಂಬುದು ಚುನಾವಣೆಯಲ್ಲಿ ಗೊತ್ತಾಗಲಿದೆ.

ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಜೆಡಿಎಸ್ ಪರ ಪ್ರಚಾರ ನಡೆಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ. ಇತ್ತೀಚೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪ್ರಚಾರಕ್ಕೆ ಆಹ್ವಾನ ನೀಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ:ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು, ತೆಲಂಗಾಣಕ್ಕೆ ಹೊಂದಿ ಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಸಹ ಅವರಿಗೆ ಸಾಥ್ ನೀಡಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಕೆಸಿಆರ್ ನೇತೃತ್ವದಲ್ಲಿ ಬಿಆರ್​​ಎಸ್ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಇದರ ಭಾಗವಾಗಿ ಕೆಸಿಆರ್ ಹಾಗೂ ಸಚಿವರು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಗಂಗಾವತಿ, ಯಾದಗಿರಿ ಹಾಗೂ ಕಲಬುರಗಿ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿವೆ. ಈ ಜಿಲ್ಲೆಗಳಲ್ಲಿ ಜೆಡಿಎಸ್ ಬಲದ ಹೊರತಾಗಿ ಅಲ್ಲಿನ ಜನರ ನಿರೀಕ್ಷೆ, ಮನಸ್ಥಿತಿ, ಅಭಿಪ್ರಾಯ ಮತ್ತಿತರ ವಿಷಯಗಳ ಬಗ್ಗೆ ಕೆಸಿಆರ್ ಮಾಹಿತಿ ತರಿಸಿಕೊಂಡಿದ್ದಾರೆ. ಈ ಜಿಲ್ಲೆಗಳ 41 ವಿಧಾನಸಭೆ ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ತೆಲುಗು ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇಲ್ಲಿ ಕೆಸಿಆರ್ ಪ್ರಚಾರ ಮಾಡಿದರೆ ಜೆಡಿಎಸ್ ಗೆ ಅನುಕೂಲ ಆಗಬಹುದು ಎಂಬುದು ರಾಜಕೀಯ ಲೆಕ್ಕಾಚಾರ.

ಹೆಚ್ಚು ಸ್ಥಾನ ಗಳಿಸಲು ಕಾರ್ಯತಂತ್ರ:ಈಗಾಗಲೇ ಜೆಡಿಎಸ್ ಘೋಷಣೆ ಮಾಡಿರುವ ರೈತ ಬಂಧು, ರೈತ ಭೀಮಾ ಹಾಗೂ 24-7 ವಿದ್ಯುತ್ ಪೂರೈಕೆ ಮುಂತಾದ ಯೋಜನೆಗಳ ಬಗ್ಗೆ ಬಿಆರ್​​ಎಸ್ ಪ್ರಚಾರ ಮಾಡಲಿದೆ. 2018ರಲ್ಲಿ ಬೀದರ್ ದಕ್ಷಿಣ, ಗುರುಮಠಕಲ್, ಮಾನ್ವಿ ಹಾಗೂ ಸಿಂಧನೂರು ಸೇರಿ 4 ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಸಾಧಿಸಿತ್ತು. ಈ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ದಳಪತಿಗಳು ಕಾರ್ಯತಂತ್ರ ರೂಪಿಸಿದ್ದಾರೆ.

ಅದೇ ರೀತಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಕೋಲಾರ, ಚಿಂತಾಮಣಿ ಕ್ಷೇತ್ರಗಳಲ್ಲಿ ಹೆಚ್ಚು ತೆಲುಗು ಮಾತನಾಡುವವರಿದ್ದು, ಅವರನ್ನು ತನ್ನತ್ತ ಸೆಳೆಯಲು ಜೆಡಿಎಸ್ ತಂತ್ರಗಾರಿಕೆ ನಡೆಸುತ್ತಿದೆ. ತೆಲಂಗಾಣ ಗಡಿ ಭಾಗದಲ್ಲಿ ಕೆಸಿಆರ್ ಪ್ರಚಾರ ನಡೆಸಿದರೆ ಜೆಡಿಎಸ್​​ಗೆ ಒಂದಷ್ಟು ಮತಗಳು ಬರುತ್ತವೆ ಎಂಬುದು ನಾಯಕರ ಲೆಕ್ಕಾಚಾರ. ಇದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ. ಈಗಾಗಲೇ ಪಂಚರತ್ನ ರಥಯಾತ್ರೆ ಮೂಲಕ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಜೆಡಿಎಸ್, ನಾಮಪತ್ರ ಸಲ್ಲಿಸಿದ ನಂತರ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲಿದೆ.

ಇದನ್ನೂ ಓದಿ:ಕೆಸಿಆರ್ ಭೇಟಿಯಾದ ಹೆಚ್​ಡಿಕೆ: ಪರ್ಯಾಯ ರಾಜಕೀಯ ಕೂಟ ರಚನೆ ಬಗ್ಗೆ ಚರ್ಚೆ

ABOUT THE AUTHOR

...view details