ಬೆಂಗಳೂರು: ನಗರದ ಪ್ರಮುಖ ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಟಿಎಂ (ಭೈರಸಂದ್ರ, ತಾವರೆಕೆರೆ, ಮಡಿವಾಳ) ಲೇಔಟ್ ಕ್ಷೇತ್ರ ಸಹ ಒಂದು. ಕ್ಷೇತ್ರದ ಪುನರ್ ವಿಂಗಡಣೆಯಾದ ವರ್ಷದಿಂದ ಇಲ್ಲಿಯವರೆಗೆ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ರಾಮಲಿಂಗಾರೆಡ್ಡಿ ಅವರು ಅಲ್ಲಿಂದ ಈವರೆಗೆ ಏಳು ಬಾರಿ ಗೆಲುವು ಸಾಧಿಸಿದ್ದಾರೆ.
ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕ:ಜಯನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಜಯಗಳಿಸಿದ್ದ ಅವರು, 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಹೊಸದಾಗಿ ರಚನೆಯಾದ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಬಂದರು. ಇಲ್ಲೂ ಸಹ ಮೂರು ಬಾರಿ ಗೆಲುವು ಕಂಡ ರಾಮಲಿಂಗಾರೆಡ್ಡಿ, ಅಲ್ಲಿಂದ ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಅವರು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕರೆಂದರೆ ಅದು ರಾಮಲಿಂಗಾರೆಡ್ಡಿ. ಶಾಂತ ಸ್ವಭಾವದ ರೆಡ್ಡಿ ಅವರು, ಜನರ ಹತ್ತಿರಕ್ಕೆ ಹೋಗುತ್ತಾರೆ. ಜನರಿಗೆ ತಕ್ಷಣ ಸ್ಪಂದಿಸುತ್ತಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತವೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಅವರು ತಮ್ಮ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಬಿಟಿಎಂ ಲೇಔಟ್ ಕ್ಷೇತ್ರ ವ್ಯಾಪ್ತಿಗೆ ಈಜೀಪುರ, ಬಿಟಿಎಂ ಲೇಔಟ್ 1 ಮತ್ತು 2ನೇ ಹಂತ, ಲಕ್ಕಸಂದ್ರ, ಮಡಿವಾಳ, ಕೋರಮಂಗಲ, ಆಡುಗೋಡಿ, ಸುದ್ದುಗುಂಟೆಪಾಳ್ಯ, ಜಕ್ಕಸಂದ್ರ ವಾರ್ಡ್ಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಕೊಳಗೇರಿಗಳು ಹೆಚ್ಚಿರುವ ಕಾರಣ ಅಭಿವೃದ್ಧಿ ಕಾಣಬೇಕಾದ ಪ್ರದೇಶಗಳು ಸಾಕಷ್ಟಿವೆ. ಹಲವು ವರ್ಷಗಳಿಂದ ಮೂಲ ಸೌಲಭ್ಯಗಳ ಕೊರತೆ ಇದೆ. ಇದರ ಜತೆಗೆ ಸಂಚಾರ ದಟ್ಟಣೆ ಸಮಸ್ಯೆಯೂ ಒಂದು. ಹೆಚ್ಚು ಮಧ್ಯಮ ಹಾಗೂ ಕೆಳವರ್ಗದ ಜನರು ಈ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ.
ಕಳೆದ ಮೂರು ಚುನಾವಣೆ ಫಲಿತಾಂಶ: 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಲಲ್ಲೇಶ್ ರೆಡ್ಡಿ ಅವರನ್ನು 20,478 ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶ ಮಾಡಿದರು. ರಾಮಲಿಂಗಾ ರೆಡ್ಡಿ ಒಟ್ಟು 67,085 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಲಲ್ಲೇಶ್ ರೆಡ್ಡಿ 46,607 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಜೆಡಿಎಸ್ ಅಭ್ಯರ್ಥಿ 17,307 ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದರು.
2013 ರಲ್ಲಿ ಕ್ಷೇತ್ರವು ಒಟ್ಟು 2,06,974 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,10,486. ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿ 69,712 ಮತ ಪಡೆದು ಇದೇ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾದರು. ಬಿಜೆಪಿ ಅಭ್ಯರ್ಥಿ ಎನ್ ಸುಧಾಕರ್ 20,664 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. ರಾಮಲಿಂಗಾ ರೆಡ್ಡಿ ಈ ಚುನಾವಣೆಯಲ್ಲಿ 49,048 ಮತಗಳಿಂದ ಗೆಲುವು ಕಂಡರು. 83,46 ಮತ ಜೆಡಿಎಸ್ ಅಭ್ಯರ್ಥಿ ಸ್ಥಾನ ಮೂರಲ್ಲಿದ್ದರು.
2008 ರಲ್ಲಿ ಕ್ಷೇತ್ರವು ಒಟ್ಟು 2,16,392 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,01,182. ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾ ರೆಡ್ಡಿ 46,811 ಮತಗಳನ್ನು ಪಡೆದು ಮೂರನೇ ಬಾರಿ ಗೆದ್ದು ಸಚಿವರಾದರು. 44,954 ಮತ ಪಡೆದ ಬಿಜೆಪಿ ಅಭ್ಯರ್ಥಿ ಜಿ ಪ್ರಸಾದ್ ರೆಡ್ಡಿ ಎರಡನೇ ಸ್ಥಾನಕ್ಕೆ ಕುಸಿದಿದ್ದರೆ, 6,031 ಮತ ಪಡೆದ ಜೆಡಿಎಸ್ ಅಭ್ಯರ್ಥಿ ಸ್ಥಾನ ಮೂರರಲ್ಲಿದ್ದರು. ರಾಮಲಿಂಗಾ ರೆಡ್ಡಿ 1857 ಮತಗಳಿಂದ ಗೆದ್ದಿದ್ದರು.
ಸಮಸ್ಯೆಗಳೇನು?: ಮಡಿವಾಳ ಕೆರೆ ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಪಾರ್ಕ್ಗಳು, ರಸ್ತೆ ಮತ್ತಿತರ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿದೆ. ಆದರೆ, ಈ ಕ್ಷೇತ್ರದಲ್ಲಿ ಶೌಚಾಲಯಗಳ ಕೊರತೆ ಬಹಳಷ್ಟು ಇದೆ. ಕುಡಿವ ನೀರಿನ ವ್ಯವಸ್ಥೆಯೂ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯರು.
"ನಾನು ಈಗಿನ ಚುನಾವಣೆ ಬಗ್ಗೆ ಮಾತನಾಡುವುದಿಲ್ಲ. 87 ವರ್ಷದಿಂದ ಹಲವಾರು ನಾಯಕರನ್ನು ಕಂಡಿದ್ದೇನೆ. ಹಿಂದಿನ ಚುನಾವಣೆಗೂ, ಈಗಿನ ಚುನಾವಣೆಗೂ ತುಂಬಾ ವ್ಯತ್ಯಾಸ ಇದೆ. ಈಗ ಹಣಕ್ಕಾಗಿ ಮತಗಳು ಮಾರಾಟವಾಗುತ್ತಿವೆ. ಇದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ" ಎಂದು ಹೆಸರು ಹೇಳಲು ಇಚ್ಚಿಸದ ಮೈಕೋ ಲೇಔಟ್ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.