ಕರ್ನಾಟಕ

karnataka

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ

By

Published : Sep 24, 2020, 2:43 PM IST

ಕೊರೊನಾ ಚಿಕಿತ್ಸೆ ಫಲನೀಡದೆ ನಿಧನ ಹೊಂದಿದ್ದ ಸಚಿವ ಸುರೇಶ್ ಅಂಗಡಿ ಅವರಿಗೆ ಕಲಾಪದಲ್ಲಿ ಸಂತಾಪ ಸೂಚಿಸಲಾಯಿತು. ಬಳಿಕ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಗಡಿಯವರ ಸಾಧನೆಗಳನ್ನು ಸದನದಲ್ಲಿ ಪ್ರಸ್ತುತಪಡಿಸಿದರು. ಬಳಿಕ ಕಲಾಪವನ್ನು ಅರ್ಧ ಗಂಟೆ ಮುಂದೂಡಲಾಯಿತು.

Assembly condoles death of union Minister Suresh Angadi
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ

ಬೆಂಗಳೂರು: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಲಾಯಿತು. ಸದನ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.

ಸುರೇಶ್ ಅಂಗಡಿ ಅವರು 1955, ಜೂ.1 ರಂದು ಬೆಳಗಾವಿ ಜಿಲ್ಲೆಯ ಕೆ.ಕೊಪ್ಪ ಗ್ರಾಮದಲ್ಲಿ ಜನಿಸಿದ್ದರು. ಬಿಕಾಂ ಮತ್ತು ಎಲ್​​ಎಲ್​​ಬಿ ಪದವೀಧರರಾಗಿದ್ದರು. ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಸಮಾಜ ಸೇವೆಗಳಲ್ಲಿ ಆಸಕ್ತಿ ಹೊಂದಿದ್ದರು. ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

2004ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ನಂತರ 2009 ಮತ್ತು 2014 ಹಾಗೂ 2019ರಲ್ಲಿ ಸತತವಾಗಿ ನಾಲ್ಕನೇ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು.

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ
ಸಂಸತ್‍ನ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದ ಅವರು, 2019ರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು , ಬೆಳಗಾವಿ- ಕಿತ್ತೂರು-ಧಾರವಾಡ ರೈಲು ಮಾರ್ಗಕ್ಕೆ ಅನುಮೋದನೆ ಸೇರಿದಂತೆ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ರೈಲ್ವೆ ಯೋಜನೆಗಳಿಗೆ ಜೀವ ತುಂಬುವ ಗುರಿ ಹೊಂದಿದ್ದರು. ಬಡ ಜನರ ಶಿಕ್ಷಣದ ಕುರಿತು ವಿಶೇಷ ಕಾಳಜಿ ಹೊಂದಿದ್ದ ಅಂಗಡಿ ಅವರು ನರ್ಸರಿಯಿಂದ ಇಂಜಿನಿಯರ್​​​ವರೆಗೂ ಅತ್ಯಾಧುನಿಕ ಅನುಕೂಲವಿರುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ನೆನೆದರು.

ಸ್ಪೀಕರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸುರೇಶ್ ಅಂಗಡಿ ಅವರು ನಿಧನರಾಗಿರುವುದು ದುಃಖದ ಸಂಗತಿ. ಕೊರೊನಾಗೆ ತುತ್ತಾಗಿದ್ದ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿರುವುದು ತುಂಬಲಾರದ ನಷ್ಟ ಎಂದರು.

ಶಿವಮೊಗ್ಗ ಸೇರಿದಂತೆ ರಾಜ್ಯದ ನಾಲ್ಕೈದು ಕಡೆ ಇತ್ತೀಚೆಗೆ ಮೇಲ್ಸೇತುವೆಗೂ ಅನುಮೋದನೆ ಕೊಟ್ಟಿದ್ದರು. ಬೆಳಗಾವಿ ಭಾಗದಲ್ಲಿ ರಾಜಕೀಯವಾಗಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಷ್ಟ್ರಮಟ್ಟದ ಏಮ್ಸ್ ಅಂತಹ ಸಂಸ್ಥೆಯಲ್ಲೇ ಸುರೇಶ್ ಅಂಗಡಿ ಅವರು ಗುಣಮುಖವಾಗಲಿಲ್ಲ ಎಂದರೆ ಬೇರೆಯವರ ಪಾಡೇನು. ಅವರಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆಗೆ ಅವಕಾಶವಿತ್ತು ಎಂದರು.

ಇನ್ನು ಶಾಸಕ ನಾರಾಯಣ ರಾವ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದನದ ಹಲವು ಸದಸ್ಯರು ಕೊರೊನಾದಿಂದ ಗುಣಮುಖರಾಗಿ ಬಂದಿದ್ದಾರೆ. ಎಲ್ಲರೂ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಸಲಹೆ ಮಾಡಿದರು.

ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಹಾಮನಿ ಮಾತನಾಡಿ, ಸುರೇಶ್ ಅಂಗಡಿ ಅವರು ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಆರಂಭಕ್ಕೆ ಕಾರಣರಾದವರು. ಬೆಂಗಳೂರು-ಬೆಳಗಾವಿ ರೈಲ್ವೆಯನ್ನು ಪ್ರಾರಂಭಿಸಿದರು ಎಂದು ಗುಣಗಾನ ಮಾಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪುರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಕೆ.ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್, ಸೋಮಶೇಖರ ರೆಡ್ಡಿ ಸೇರಿದಂತೆ ಸದನದ ಹಲವು ಸದಸ್ಯರು ಮೃತರಿಗೆ ಸಂತಾಪ ಸೂಚಿಸಿದರು. ಸಭಾಧ್ಯಕ್ಷರು ಸಂತಾಪ ಸೂಚನಾ ನಿರ್ಣಯವನ್ನು ಮೃತರ ಕುಟುಂಬದವರಿಗೆ ಕಳುಹಿಸಿಕೊಡುವುದಾಗಿ ಘೋಷಿಸಿ ಮೃತರ ಗೌರವಾರ್ಥ ಸದನದಲ್ಲಿ 1 ನಿಮಿಷ ಶೋಕಾಚರಣೆ ಮಾಡಿ ಸದನದ ಕಾರ್ಯ ಕಲಾಪಗಳನ್ನು ಅರ್ಧ ಗಂಟೆ ಕಾಲ ಮುಂದೂಡಿದರು.

ABOUT THE AUTHOR

...view details