ಕರ್ನಾಟಕ

karnataka

ETV Bharat / state

ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಪಡೆದು ಅಭ್ಯರ್ಥಿ ಆಯ್ಕೆ: ಡಿಕೆಶಿ - ETV Bharath Karnataka

ಪಕ್ಷದ ಕಾರ್ಯಕರ್ತರು ನಮ್ಮ ಆಧಾರ ಸ್ಥಂಭವಾಗಿದ್ದು, ಅವರ ಅಭಿಪ್ರಾಯ ಪಡೆದುಕೊಂಡು. ಡಿಸೆಂಬರ್ 31ರ ಒಳಗಾಗಿ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕು. ಜನವರಿ 1ರ ಒಳಗಾಗಿ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಗಳ ಕ್ಷೇತ್ರದ ಪರಿಷ್ಕೃತ ಅರ್ಜಿಗಳ ಪಟ್ಟಿಯನ್ನು ನೀಡಬೇಕು. ನಂತರ ರಾಜ್ಯ ಮಟ್ಟದ ಚುನಾವಣಾ ಸಮಿತಿಯು ಮತ್ತೆ ಸಭೆ ಸೇರಿ ಎಲ್ಲ ಮಾನದಂಡಗಳನ್ನು ಅನುಸರಿಸಿ ಮುಂದಿನ ಪ್ರಕ್ರಿಯೆಯನ್ನು ನಡೆಸಲಿದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

Congress Election Committee Meeting
ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ

By

Published : Dec 19, 2022, 8:03 AM IST

ಕಾರ್ಯಕರ್ತರ ವಿಶ್ವಾಸ ಪಡೆದ ಅಭ್ಯರ್ಥಿ ವಿಧಾನಸಭೆಗೆ ಆಯ್ಕೆ

ಬೆಂಗಳೂರು:ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಮಾರ್ಗಸೂಚಿ ರೂಪುರೇಷೆಗಳ ಬಗ್ಗೆ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಕೆ ಜೆ ಜಾರ್ಜ್, ಎಚ್ ಸಿ ಮಹದೇವಪ್ಪ ಮತ್ತಿತರರು ಭಾಗವಹಿಸಿದ್ದರು.

ಸಭೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಪಕ್ಷದ ಆಧಾರ ಸ್ಥಂಭವಾಗಿರುವ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಘಟಕಗಳ ಮುಖಂಡರ ಜೊತೆ ಚರ್ಚೆ ಮಾಡಿ ಅವರ ಅಭಿಪ್ರಾಯ ಪಡೆಯಲಾಗುವುದು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಧ್ವನಿ ಪಕ್ಷದ ಧ್ವನಿಯಾಗಬೇಕು ಎಂಬುದು ಈ ಸಮಿತಿಯ ತೀರ್ಮಾನವಾಗಿದೆ ಎಂದರು.

ಹೀಗಾಗಿ ಇದುವರೆಗೂ ಬಂದಿರುವ ಅರ್ಜಿಗಳನ್ನು ಆಯಾ ಜಿಲ್ಲಾ ಕಾಂಗ್ರೆಸ್​ಗಳಿಗೆ ಕಳುಹಿಸಿಕೊಡುತ್ತೇವೆ. ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಬ್ಲಾಕ್ ಮಟ್ಟದ ನಾಯಕರನ್ನು ಕರೆಸಿ ಚರ್ಚೆ ಮಾಡಲಾಗುವುದು. ರಾಜ್ಯಮಟ್ಟದ ಚುನಾವಣಾ ಸಮಿತಿಯಿಂದ ಇಬ್ಬರು ಸದಸ್ಯರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗುವುದು. ಪಕ್ಷದ 5 ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಚುನಾವಣಾ ಸಮಿತಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಎಲ್ಲರೂ ಸೇರಿ ಚರ್ಚೆ ಮಾಡುತ್ತಾರೆ.

ಆದಷ್ಟು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಸೇರಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು. ಪ್ರತಿ ಕ್ಷೇತ್ರಗಳಲ್ಲಿ 1 ರಿಂದ 3 ಆಕಾಂಕ್ಷಿಗಳ ಹೆಸರನ್ನು ಪರಿಷ್ಕರಿಸಿ ಕೆಪಿಸಿಸಿಗೆ ಕಳುಹಿಸುವಂತೆ ನಾವು ಸೂಚನೆ ನೀಡಿದ್ದೇವೆ. ಒತ್ತಡ ಹೆಚ್ಚಾಗಿದ್ದ ಸಂದರ್ಭದಲ್ಲಿ ಅಂತಹ ಕ್ಷೇತ್ರಗಳ ವಿಚಾರವನ್ನು ರಾಜ್ಯಮಟ್ಟದಲ್ಲಿ ನಾವು ಕೂತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂಬ ವಿವರ ನೀಡಿದರು.

ಪಕ್ಷದ ಕಾರ್ಯಕರ್ತರು ನಮ್ಮ ಆಧಾರ ಸ್ಥಂಭವಾಗಿದ್ದು, ಅವರ ಅಭಿಪ್ರಾಯ ಪಡೆದುಕೊಂಡು. ಡಿಸೆಂಬರ್ 31ರ ಒಳಗಾಗಿ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕು. ಜನವರಿ 1ರ ಒಳಗಾಗಿ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಗಳ ಕ್ಷೇತ್ರದ ಪರಿಷ್ಕೃತ ಅರ್ಜಿಗಳ ಪಟ್ಟಿಯನ್ನು ನೀಡಬೇಕು. ನಂತರ ರಾಜ್ಯ ಮಟ್ಟದ ಚುನಾವಣಾ ಸಮಿತಿಯು ಮತ್ತೆ ಸಭೆ ಸೇರಿ ಎಲ್ಲ ಮಾನದಂಡಗಳನ್ನು ಅನುಸರಿಸಿ ಮುಂದಿನ ಪ್ರಕ್ರಿಯೆಯನ್ನು ನಡೆಸಲಿದೆ. ಉಳಿದಂತೆ ನಮ್ಮ ರಾಜ್ಯ ಪ್ರವಾಸದ ಕುರಿತು ನಾಳೆ ಮಾಹಿತಿ ನೀಡಲಾಗುವುದು ಎಂದರು.

ಅಭ್ಯರ್ಥಿಗಳನ್ನು ಯಾರೂ ಘೋಷಿಸುವಂತಿಲ್ಲ:ನಿಮ್ಮ ಪಕ್ಷದ ಬೇರೆ ನಾಯಕರು ಕೆಲವು ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಾರೆ ಎಂದು ಕೇಳಿದಾಗ,'ಪಕ್ಷದ ಅಭ್ಯರ್ಥಿಗಳನ್ನು ಯಾರೂ ಘೋಷಿಸುವಂತಿಲ್ಲ. ಯಾರಾದರೂ ಪಕ್ಷದ ಇತಿಮಿತಿಯನ್ನು ಮೀರಿದರೆ ಅಂತಹವರಿಗೆ ನೋಟಿಸ್ ನೀಡಲಾಗುವುದು' ಎಂದು ಸ್ಪಷ್ಟಪಡಿಸಿದರು.

ಅರ್ಜಿ ಹಾಕಿದವರಿಗೆ ಪ್ರಥಮ ಪ್ರಾಶಸ್ತ್ಯ:ಅರ್ಜಿ ಹಾಕಿರುವವರ ಜೊತೆಗೆ ಅರ್ಜಿ ಹಾಕದವರ ಹೆಸರನ್ನು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ,'ಸದ್ಯಕ್ಕೆ ನಾವು ಯಾರಿಲ್ಲ ಅರ್ಜಿ ಹಾಕಿದ್ದಾರೆ ಅವರ ಹೆಸರುಗಳನ್ನು ಮಾತ್ರ ಪರಿಗಣಿಸುತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅಭ್ಯರ್ಥಿ ಸಿಕ್ಕಿದರೆ ಅವರನ್ನು ಕಣಕ್ಕಿಳಿಸುವ ಅವಕಾಶವನ್ನು ಇಟ್ಟುಕೊಂಡಿರುತ್ತೇವೆ' ಎಂದು ತಿಳಿಸಿದರು.

ಜನವರಿ 15ರ ಒಳಗಾಗಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ:ಸಂಕ್ರಾಂತಿ ಒಳಗಾಗಿ ಪಕ್ಷದ ಅಭ್ಯರ್ಥಿ ಪ್ರಕಟ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ,'ಈ ತಿಂಗಳು 31ರ ಒಳಗಾಗಿ ಈ ಪ್ರಕ್ರಿಯೆ ಮುಕ್ತಾಯಗೊಳಿಸಿ ಜನವರಿ ಒಂದರ ಒಳಗಾಗಿ ಪರಿಷ್ಕೃತ ಪಟ್ಟಿಯನ್ನು ನೀಡಬೇಕು ಎಂದು ಸೂಚಿಸಿದ್ದೇವೆ. ಜನವರಿ 5ರಂದು ರಾಜ್ಯಮಟ್ಟದ ಚುನಾವಣೆ ಸಮಿತಿಯು ಮತ್ತೆ ಸಭೆ ನಡೆಸಬೇಕು, ಆದಷ್ಟು ಬೇಗ ಜನ ಜನವರಿ 15ರ ಒಳಗಾಗಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ಪ್ರಯತ್ನ ಮಾಡುತಿದ್ದೇವೆ.

ನಮಗೆ ಮಾಹಿತಿ ಇಲ್ಲ:ಸಾವರ್ಕರ್ ಅವರ ಭಾವಚಿತ್ರ ಅನಾವರಣ ಕುರಿತು ಕೇಳಿದ ಪ್ರಶ್ನೆಗೆ,'ಈ ಕುರಿತಾಗಿ ನಮಗೆ ಯಾವುದೇ ಮಾಹಿತಿ ಇಲ್ಲ. ನಾವು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕುತ್ತಿದ್ದೇವೆ ಈ ಕಾರ್ಯಕ್ರಮಕ್ಕೆ ನೀವು ಆಗಮಿಸಬೇಕು ಎಂದು ಸ್ಪೀಕರ್ ಅವರ ಕಚೇರಿಯಿಂದ ನಮಗೆ ಆಹ್ವಾನ ಬಂದಿದೆ. ಇತರ ವಿಚಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರದ ಕುರಿತು ನಮಗೆ ಗೊತ್ತಿಲ್ಲದ ಕಾರಣ ನಾವು ಮಾತನಾಡುವುದಿಲ್ಲ. ಈ ವಿಚಾರವಾಗಿ ನಿಮ್ಮಿಂದ ಈಗ ಮಾಹಿತಿ ಸಿಕ್ಕಿದೆ ಈ ಕುರಿತು ಈಗ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ' ಎಂದರು.

ಇದನ್ನೂ ಓದಿ:ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್: ಜಮೀರ್ ಅಹಮ್ಮದ್

ABOUT THE AUTHOR

...view details