ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧದ ಪ್ರಕರಣದ ವಿಚಾರಣೆ ಪ್ರಾರಂಭಿಸಲು ನಗರದ 66ನೇ ನ್ಯಾಯಾಲಯ ತೀರ್ಮಾನಿಸಿದೆ.
ಪ್ರಕರಣದ ವಿಚಾರಣೆಗೆ ಈ ಹಿಂದೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ವಿಸ್ತರಣೆ ಮಾಡಿಲ್ಲ. ಈ ನಿಟ್ಟಿನಲ್ಲಿ ವಿಚಾರಣೆಯನ್ನು ಮುಂದುವರಿಸಲು ಸೆಷನ್ಸ್ ಕೋರ್ಟ್ ನಿರ್ಧರಿಸಿದೆ. ಜೊತೆಗೆ ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿ ಹಿರಿಯ ನ್ಯಾಯವಾದಿ ಎಂ.ಎಸ್. ಶ್ಯಾಮ್ ಸುಂದರ್ ಮುಂದುವರಿಕೆಗೆ ಅನುಮತಿ ನೀಡಿದೆ.
ಆದರೆ ಶ್ಯಾಮ್ ಸುಂದರ್ ಈಗ ಹಿರಿಯ ವಕೀಲರಾಗಿರುವ ಹಿನ್ನೆಲೆಯಲ್ಲಿ ಅವರು ಎಸ್ಪಿಪಿಯಾಗಿ ಮುಂದುವರಿಯುವಂತಿಲ್ಲ ಎಂದು ನಲಪಾಡ್ ಪರ ವಕೀಲರು, ನ್ಯಾ.ನಟರಾಜ್ ಅವರಿದ್ದ ನ್ಯಾಯಪೀಠದ ಮುಂದೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿದ ಕೋರ್ಟ್, ಸಾಕ್ಷ್ಯ ವಿಚಾರಣೆ ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿತು. ಹಾಗಾಗಿ ನಲಪಾಡ್‌ಗೆ ಸಂಕಷ್ಟ ಎದುರಾಗಿದೆ.