ಬೆಂಗಳೂರು: ಬಾಡಿಗೆ ಮನೆ ಖಾಲಿ ಮಾಡುವ ವಿಚಾರವಾಗಿ ತಾಯಿಗೆ ಬೈದಿದ್ದನ್ನು ಪ್ರಶ್ನಿಸಿದ ಸಹೋದರರ ಹಣೆಗೆ ಗನ್ ಇಟ್ಟು ಬೆದರಿಸಿದ್ದಲ್ಲದೇ ಸಾರ್ವಜನಿಕವಾಗಿ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ಮುದ್ದಯ್ಯನಪಾಳ್ಯದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಕೌಶಿಕ್ ಚಿರಾಗ್ ಹಾಗೂ ನಂದನ್ ಚಿರಾಗ್ ಎಂಬ ಸಹೋದರರ ಮೇಲೆ ಕ್ರೌರ್ಯ ಮೆರೆದ ರಾಯಲ್ ಬೋರ್ವೆಲ್ ಮಾಲೀಕ ಅನಿಲ್, ಭರತ್, ರಾಜು ಹಾಗೂ ಚಂದನ್ ಎಂಬುವರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆರೋಪಿ ಭರತ್ನ ತಾತ ರಾಮಚಂದ್ರ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ವಾಸವಿದ್ದ ಕೌಶಿಕ್ ಹಾಗೂ ನಂದನ್ ಕುಟುಂಬಕ್ಕೆ ಮನೆ ಖಾಲಿ ಮಾಡುವಂತೆ ಹೇಳಲಾಗಿತ್ತು. ಅಕ್ಟೋಬರ್ 30ರಂದು ಮನೆಗೆ ಬಂದಿದ್ದ ರಾಮಚಂದ್ರ ಹಾಗೂ ಭರತ್, ಕೌಶಿಕ್ ತಾಯಿಯ ಬಳಿ ಕಿರಿಕ್ ಮಾಡಿಕೊಂಡು ಹೋಗಿದ್ದರು. ತಾಯಿಗೆ ಬೈದಿದ್ದನ್ನ ಪ್ರಶ್ನಿಸಿ ಭರತ್ ಬಳಿ ಫೋನ್ನಲ್ಲಿ ಕೌಶಿಕ್ ಮಾತನಾಡಿದ್ದ.
ಇದನ್ನೂ ಓದಿ:72 ವರ್ಷದ ವೃದ್ಧನ ಮೇಲೆ ಪುತ್ರ, ಸೊಸೆ, ಮಗಳಿಂದ ಅಮಾನವೀಯ ಹಲ್ಲೆ: ವಿಡಿಯೋ
ಈ ಕುರಿತು ನೇರವಾಗಿ ಮಾತನಾಡೋಣ ಬಾ ಅಂತ ನಿನ್ನೆ ಮಧ್ಯಾಹ್ನ ಮುದ್ದಯ್ಯನಪಾಳ್ಯದ ರಾಯಲ್ ಬೋರ್ವೆಲ್ ಆಫೀಸ್ಗೆ ಕರೆಸಿಕೊಂಡಿದ್ದ ಭರತ್, ತನ್ನ ಬಾಮೈದ ಅನಿಲ್ ಜೊತೆ ಸೇರಿ ಕೌಶಿಕ್ ಮತ್ತು ಆತನ ತಮ್ಮ ನಂದನ್ಗೆ 'ನಾವ್ಯಾರು ಅಂತ ಗೊತ್ತಿಲ್ಲದೇ ಮಾತಾಡ್ತಿಯಾ. ಆಫೀಸ್ಗೆ ಬರೋವಷ್ಟು ಧಮ್ ಇದ್ಯಾ?' ಎಂದು ಸಹೋದರರ ಬಟ್ಟೆ ಬಿಚ್ಚಿಸಿ ರಾಡ್ ಮತ್ತು ಮಾರಕಾಸ್ತ್ರದಿಂದ ಮನೋಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಸಾಲದ್ದಕ್ಕೆ ಅನಿಲ್ ತನ್ನ ಬಳಿಯಿದ್ದ ಗನ್ ಅನ್ನು ಸಹೋದರರ ಹಣೆಗೆ ಇಟ್ಟು 'ನಮ್ಮ ತಂಟೆಗೆ ಬಂದ್ರೆ ಸುಟ್ಟು ಹಾಕೋದಾಗಿ' ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಸಾಲದೆಂಬಂತೆ ರಸ್ತೆಗೆ ಎಳೆತಂದು ಜನರ ಮುಂದೆಯೇ ಹಲ್ಲೆ ನಡೆಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಆನೇಕಲ್: ರೋಲ್ ಕಾಲ್ ನೀಡದ್ದಕ್ಕೆ ಪಟಾಕಿ ಅಂಗಡಿ ಮಾಲೀಕರ ಮೇಲೆ ಹಲ್ಲೆ ಆರೋಪ
ಸದ್ಯ ಆರೋಪಿಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.