ಬೆಂಗಳೂರು: ಹೊಸ ವರ್ಷ ಹಿನ್ನೆಲೆ ಯುವಕರು ನಗರದ ಲಾಡ್ಜ್ವೊಂದರಲ್ಲಿ ರೂಂ ಬುಕ್ ಮಾಡಿಕೊಂಡಿದ್ದರು. ಆದರೆ, ಮಧ್ಯರಾತ್ರಿ ಜಗಳ ನಡೆದು ಲಾಡ್ಜ್ ಸಿಬ್ಬಂದಿ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಬೆಳಕಿದೆ ಬಂದಿದೆ.
ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ ಸಂತೋಷ್, ಹರಿ, ಪ್ರಕಾಶ್, ರಂಜೀತ್ ಕುಮಾರ್ ಹಾಗೂ ಸಂಜಯ್ ಎಂಬುವರು ಹೊಸ ವರ್ಷ ಆಚರಣೆಗಾಗಿ ಡೊಡ್ಡ ಬಾಣಸವಾಡಿಯ ಒಲಿವ್ ರೆಸಿಡೆನ್ಸಿಯಲ್ಲಿ ಒಂದು ರಾತ್ರಿಗೆ ರೂಂ ಬುಕ್ ಮಾಡಿದ್ದರಂತೆ. ಅದರಂತೆ ಡಿ. 31ರ ರಾತ್ರಿ ರೂಂಗೆ ಎಲ್ಲರೂ ಆಗಮಿಸಿದ್ದಾರೆ.
ಬೆಂಗಳೂರಲ್ಲಿ ವ್ಯಕ್ತಿಗೆ ಚಾಕು ಇರಿತ ಮಧ್ಯರಾತ್ರಿವರೆಗೂ ಹೊಸ ವರ್ಷಾರಣೆ ಮಾಡಿದ ಅವರು 1.30ರ ವೇಳೆಗೆ ಕ್ಷುಲ್ಲಕ ಕಾರಣಕ್ಕಾಗಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ರೂಂನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ರೆಸಿಡೆನ್ಸಿಯ ಮೇಲ್ವಿಚಾರಕ ಆರ್ಷದ್ ಎಂಬುವರು ಇವರ ರೂಂಗೆ ಹೋಗಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಯುವಕರು ಸಿಬ್ಬಂದಿಗೆ ಮನಬಂದಂತೆ ಥಳಿಸಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ಘಟನೆ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಪೊಲೀಸರು ತನಿಖೆ ಕೈಗೊಂಡಿದ್ದು, ಐವರು ಆರೋಪಿಗಳ ಪೈಕಿ ಹರಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.