ಕರ್ನಾಟಕ

karnataka

ETV Bharat / state

ಪತ್ನಿಯ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ, ಆರೋಪಿ ಬಂಧನ - ಬಾಗಲೂರು ಪೊಲೀಸ್ ಠಾಣೆ

ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಂಧನ
ಆರೋಪಿ ಬಂಧನ

By ETV Bharat Karnataka Team

Published : Oct 1, 2023, 10:50 PM IST

ಬೆಂಗಳೂರು : ತನ್ನ ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬಾಗಲೂರು ಸಮೀಪದ ಚೊಕ್ಕನಹಳ್ಳಿ ನಿವಾಸಿ ನಾಗರಾಜ್ (37) ಬಂಧಿತ ಆರೋಪಿ. ಘಟನೆಯಲ್ಲಿ ಕಮ್ಮನಹಳ್ಳಿ ನಿವಾಸಿ, ಆಟೋ ಚಾಲಕ ಆರೋಗ್ಯದಾಸ್ (27) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಲ್ಡಿಂಗ್ ಕೆಲಸ ಮಾಡುವ ನಾಗರಾಜ್ ಈ ಹಿಂದೆ ಕುಟುಂಬದೊಂದಿಗೆ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಈ ವೇಳೆ ಪಕ್ಕದ ಮನೆಯ ನಿವಾಸಿಯಾದ ಆರೋಗ್ಯದಾಸ್​ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಆರೋಗ್ಯದಾಸ್, ನಾಗರಾಜ್ ಅವರ ಪತ್ನಿಯ ಜತೆ ಸಲುಗೆಯಿಂದ ಇದ್ದನಂತೆ. ಬಳಿಕ ನಾಗರಾಜ್ ಪತ್ನಿ ಮತ್ತು ಆರೋಗ್ಯದಾಸ್ ಇಬ್ಬರು ಒಟ್ಟಿಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಆಕೆಗೆ ಗೊತ್ತಾಗದ ಹಾಗೆ ಖಾಸಗಿ ಕ್ಷಣದ ವಿಡಿಯೋ ಮತ್ತು ಫೋಟೋಗಳನ್ನು ಆರೋಗ್ಯದಾಸ್ ತೆಗೆದುಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ. ಆದರೆ ಆರೋಗ್ಯದಾಸ್ ಇತ್ತೀಚೆಗೆ ಮಹಿಳೆಗೆ ಕರೆ ಮಾಡಿ ನನಗೆ ಹಣ ಕೊಡು, ಇಲ್ಲದಿದ್ದರೆ ನಿನ್ನ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಇದರಿಂದ ಆತಂಕಗೊಂಡ ಮಹಿಳೆ ಈ ವಿಚಾರವನ್ನು ತನ್ನ ಪತಿ ನಾಗರಾಜ್ ಗಮನಕ್ಕೆ ತಂದಿದ್ದರು. ಆತನಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿದ ಪತಿ, ತನ್ನ ಪತ್ನಿಯ ಕಡೆಯಿಂದ ಆರೋಗ್ಯದಾಸ್‌ಗೆ ಕರೆ ಮಾಡಿಸಿ ಮನೆಗೆ ಬರುವಂತೆ ಹೇಳಿಸಿದ್ದ. ಅದರಂತೆ ಆರೋಗ್ಯದಾಸ್ ಸೆ. 30 ರ ಮಧ್ಯಾಹ್ನ 2 ಗಂಟೆಯ ವೇಳೆ ಕಮ್ಮನಹಳ್ಳಿಯಿಂದ ಚೊಕ್ಕನಹಳ್ಳಿಗೆ ಬಂದಿದ್ದು, ಮಹಿಳೆಯ ಮನೆಯೊಳಗೆ ಬಂದ ತಕ್ಷಣ ಆಕೆ ಪತಿ ಇರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ.

ನಾಗರಾಜ್ ನನ್ನ ಹೆಂಡತಿಯ ಫೋಟೋಗಳನ್ನು ತೆಗೆದುಕೊಂಡು ಮರ್ಯಾದೆ ತೆಗೆದಿದ್ದೀಯಾ ಎಂದು ಆತನನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದ್ದು, ಆಕ್ರೋಶಗೊಂಡ ನಾಗರಾಜ್ ಗಿಡ ಕತ್ತರಿಸಲು ಮನೆ ಮುಂದೆ ಇಟ್ಟಿದ್ದ ಚಾಕುವಿನಿಂದ ಆರೋಗ್ಯದಾಸ್‌ಗೆ ಎದೆ ಮತ್ತು ಕಿವಿಗಳಿಗೆ ಚುಚ್ಚಿ ಹಾಗೂ ಎರಡು ಮುಂಗೈಗಳಿಗೆ ಕೊಯ್ದು ಗಾಯ ಮಾಡಿದ್ದರು. ಗಾಯಗೊಂಡಿದ್ದ ಆರೋಗ್ಯದಾಸ್ ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಾಗರಾಜ್‌ನನ್ನು ಬಂಧಿಸಿದ್ದಾರೆ.

ನಾಗರಾಜ್ ಕೂಡ ಪತ್ನಿಗೆ ಬ್ಲಾಕ್‌ಮೇಲ್​​ ಮಾಡುತ್ತಿದ್ದ ಎಂದು ಪ್ರತಿದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಆರೋಗ್ಯದಾಸ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖನಾದ ಬಳಿಕ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ನೌಕರನಿಗೆ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಆರೋಪ: ಮೂವರ ಬಂಧನ

ABOUT THE AUTHOR

...view details