ಬೆಂಗಳೂರು:ಬಾಲಕಿಯ ಸುಳ್ಳು ಹೇಳಿಕೆಯಿಂದ ಫುಡ್ ಡೆಲಿವರಿ ಬಾಯ್ ಸಂಕಷ್ಟಕ್ಕೆ ಸಿಲುಕಿದ ಘಟನೆ ನಗರದಲ್ಲಿ ನಡೆದಿದೆ. ಬಲವಂತವಾಗಿ ಕೈ ಹಿಡಿದು ಟೆರೇಸ್ಗೆ ಕರೆದೊಯ್ದ ಎಂದು ಬಾಲಕಿ ಹೇಳಿದ ಸುಳ್ಳಿನಿಂದ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಹಾಗೂ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಡೆಲಿವರಿ ಬಾಯ್ ಯಾವುದೇ ತಪ್ಪು ಮಾಡಿಲ್ಲ, ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಬಾಲಕಿಯೇ ಸುಳ್ಳು ಹೇಳಿದ್ದಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ವೊಂದರಲ್ಲಿ ಬಾಲಕಿಯ ಪೋಷಕರು ವಾಸವಾಗಿದ್ದಾರೆ. ಜೂನ್ 12ರಂದು ಈ ಘಟನೆ ನಡೆದಿದೆ. ದಂಪತಿಗೆ ಐದು ವರ್ಷದ ಗಂಡು ಮಗು ಹಾಗೂ ಅಪ್ರಾಪ್ತ ಮಗಳಿದ್ದಾಳೆ. ಜೂನ್ 12ರಂದು ಬೆಳಗ್ಗೆ ಮಗನನ್ನು ಶಾಲೆಗೆ ಸೇರಿಸಲು ಪೋಷಕರು ಮಗಳನ್ನು ಮನೆಯಲ್ಲೇ ಬಿಟ್ಟು ತೆರಳಿದ್ದರು. ಮಗಳಿಗೆ ಆನ್ಲೈನ್ ಕ್ಲಾಸ್ ಇದ್ದಿದ್ದರಿಂದ ಕೆಲ ಹೊತ್ತಿನ ಬಳಿಕ ದಂಪತಿಗೆ ಮನೆಗೆ ಬಂದಿದ್ದರು.
ಆದರೆ, ಮಗಳು ಕಾಣದಿರುವುದು ಪೋಷಕರ ಗಮನಕ್ಕೆ ಬಂದಿದೆ. ಅಕ್ಕಪಕ್ಕದ ಪ್ಲ್ಯಾಟ್ ನಿವಾಸಿಗಳಿಗೆ ಮಗಳ ಬಗ್ಗೆ ವಿಚಾರಿಸಿದ್ದಾರೆ. ಸತತ ಅರ್ಧ ಗಂಟೆ ಹುಡುಕಿದರೂ ಮಗಳು ಪತ್ತೆಯಾಗದ ಕಾರಣ ಪೋಷಕರು ಆತಂಕಗೊಂಡಿದ್ದರು. ಅಪಾರ್ಟ್‌ಮೆಂಟ್ ಟೆರೇಸ್ಗೆ ಹೋಗಿ ನೋಡಿದಾಗ ಮಗಳು ಪತ್ತೆಯಾಗಿದ್ದಳು. ಇಲ್ಲಿಗೇಕೆ ಬಂದಿರುವೆ ಎಂದು ಪ್ರಶ್ನಿಸಿದಕ್ಕೆ ಫುಡ್ ಡೆಲಿವರಿ ಬಾಯ್ವೊಬ್ಬ ಮನೆಗೆ ಬಂದಿದ್ದ. ಬಲವಂತವಾಗಿ ನನ್ನ ಕೈ ಹಿಡಿದು ಟೆರೇಸ್ಗೆ ಕರೆತಂದ ಎಂದು ಹೇಳಿದ್ದಳು.
ಇದರಿಂದ ಗಾಬರಿಗೊಂಡ ಪೋಷಕರು ಅಪಾರ್ಟಮೆಂಟ್ ಭದ್ರತಾ ಸಿಬ್ಭಂದಿ ಬಳಿ ವಿಚಾರಿಸಿದ್ದಾರೆ. ಅಲ್ಲೇ ಇದ್ದ ಡೆಲಿವರಿ ಬಾಯ್ನನ್ನು ಪ್ರಶ್ನಿಸಿದ್ದಾರೆ. ಆತ ನಾನೇನು ಮಾಡಿಲ್ಲ ಎಂದು ಹೇಳಿದರೂ ಮಾತು ಕೇಳದ ಪೋಷಕರು ಮಗಳ ಬಳಿ ಆತನನ್ನ ಕರೆದುಕೊಂಡು ಬಂದಿದ್ದಾರೆ. ಮಗಳು ಸಹ ಇವರೇ ತನ್ನನ್ನು ಎಳೆದೊಯ್ದಿದ್ದ ಎಂದಿದ್ದಾಳೆ. ಆಗ ಅಪಾರ್ಟಮೆಂಟ್ ನಿವಾಸಿಗಳೆಲ್ಲ ಸೇರಿಕೊಂಡು ಡೆಲಿವರಿ ಬಾಯ್ಗೆ ಮನಬಂದಂತೆ ಥಳಿಸಿದ್ದಾರೆ. ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿ ಕರೆಯಿಸಿಕೊಂಡಿದ್ದಾರೆ.