ಆನೇಕಲ್ : ತಿಂಗಳ ಹಣ ನೀಡುವಂತೆ ರೈತರು ಕ್ರಷರ್ ಮತ್ತು ಟಿಪ್ಪರ್ಗಳನ್ನು ಅಡ್ಡಗಟ್ಟಿದ ಕಾರಣಕ್ಕೆ ಅರೆಹಳ್ಳಿ ನಾರಾಯಣಸ್ವಾಮಿ ಹಾಗೂ ಮತ್ತೋರ್ವ ವ್ಯಕ್ತಿಯು ಇಬ್ಬರು ವೃದ್ಧ ರೈತರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ ಘಟನೆ ಶುಕ್ರವಾರ ಸಂಜೆ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.
ಕರಕಲಘಟ್ಟ ವಾಸಿ ರಾಮಚಂದ್ರಪ್ಪ (64), ಮುನೇಶ್ವರ ಸ್ವಾಮಿ ವೃತ್ತದ ನರಸಪ್ಪ (84) ಗಾಯಗೊಂಡ ರೈತರು. ಈ ಕುರಿತಂತೆ ಗಾಯಾಳು ರಾಮಚಂದ್ರಪ್ಪ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೊಬ್ಬನಿಗೆ ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ : ತಮ್ಮನಾಯಕನಹಳ್ಳಿ ಸರ್ವೆ ನಂ 175 ರಲ್ಲಿ ಗಾಯಾಳು ರಾಮಚಂದ್ರಪ್ಪ ಕುಟುಂಬ ವ್ಯವಸಾಯ ಮಾಡಿಕೊಂಡಿದ್ದು, ಇದೇ ಜಾಗದಲ್ಲಿ ಕ್ರಷರ್ಗಳ ಬೃಹತ್ ಲಾರಿಗಳು ಸಂಚರಿಸಲು ದಾರಿಯಿದೆ. ವಾಹನ ಸಂಚಾರದ ಧೂಳಿನಿಂದ ಬೆಳೆ ನಾಶವಾಗುತ್ತದೆ ಎಂದು ರೈತ ಆರೋಪಿಸಿದ್ದು, ಇದಕ್ಕೆ ಪರಿಹಾರವಾಗಿ ಪ್ರತಿ ಲಾರಿ ತಿಂಗಳಿಗೊಮ್ಮೆ 1000-2000 ರೂ. ಹಣ ನೀಡಿ ಸಾಗುತ್ತಿದ್ದವು. ಈ ಕುರಿತಂತೆ ಲಾರಿ ಮಾಲೀಕರೊಂದಿಗೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿತ್ತು.