ಕರ್ನಾಟಕ

karnataka

ETV Bharat / state

ಬೆಂಗಳೂರಿನ ದೇವಾಲಯದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿ ಧರ್ಮದರ್ಶಿ ಬಂಧನ

ಇತ್ತೀಚೆಗೆ ಬೆಂಗಳೂರಿನ ದೇವಸ್ಥಾನವೊಂದರಿಂದ ಮಹಿಳೆಯನ್ನು ಎಳೆದು ಹೊರಹಾಕಿ, ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಪ್ರಕರಣದ ಆರೋಪಿ ದೇಗುಲದ ಧರ್ಮದರ್ಶಿಯನ್ನು ಇದೀಗ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

Assault on a woman in a temple
ದೇವಾಲಯದಲ್ಲಿ ಮಹಿಳೆ ಮೇಲೆ ಹಲ್ಲೆ

By

Published : Jan 8, 2023, 10:55 AM IST

ಬೆಂಗಳೂರು:ದೇವಸ್ಥಾನದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಆರೋಪಿ ಧರ್ಮದರ್ಶಿ ಮುನಿಕೃಷ್ಣಪ್ಪ ಎಂಬವರನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 21ರಂದು ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಘಟನೆ ನಡೆದಿತ್ತು. ದೇಗುಲದೊಳಗೆ ತೆರಳಿದ್ದ ಮಹಿಳೆಯ ಮೇಲೆ ಆರೋಪಿ ನಡೆಸಿದ್ದ ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ಅಂದು ಆರೋಪಿ ಧರ್ಮದರ್ಶಿ ಮುನಿಕೃಷ್ಣಪ್ಪ ಹೇಳಿದ್ದೇನು?:'ದೇವಸ್ಥಾನಕ್ಕೆ ಬಂದಿದ್ದ ಮಹಿಳೆ ತನಗೆ ಮೈಮೇಲೆ ದೇವರು ಬರುತ್ತದೆ. ವೆಂಕಟೇಶ್ವರ ನನ್ನ ಪತಿ. ಗರ್ಭಗುಡಿಯಲ್ಲಿ ನಾನು ವೆಂಕಟೇಶನ ಪಕ್ಕ ಕೂರಬೇಕೆಂದು ಪಟ್ಟು ಹಿಡಿದಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರ್ಚಕರ ಮೇಲೆಯೇ ಉಗಿದಿದ್ದಳು. ಎಷ್ಟೇ ಮನವಿ ಮಾಡಿಕೊಂಡರೂ ಹೋಗದಿದ್ದಾಗ ಎಳೆದೊಯ್ದು ಹೊರಗಡೆ ಕಳಿಸಿದ್ದೇವೆ ಎಂದು ಹೇಳಿದ್ದರು.

ಪೊಲೀಸರಿಗೆ ಸಂತ್ರಸ್ತೆ ನೀಡಿದ್ದ ದೂರಿನಲ್ಲೇನಿತ್ತು?: 'ನಾನು ಗೃಹಿಣಿ. ಗಂಡ ಮತ್ತು ಎರಡು ಗಂಡು ಮಕ್ಕಳ ಜೊತೆ ಅಮೃತಹಳ್ಳಿ ನಗರದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿನ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಮುನಿಕೃಷ್ಣಪ್ಪ ಎಂಬವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಸ್ನಾನ ಮಾಡದೇ, ಶುದ್ಧಿ ಇಲ್ಲದೇ ದೇವಸ್ಥಾನಕ್ಕೆ ಬರುತ್ತೀರಾ. ನಿನಗೆ ಇಲ್ಲಿ ದರ್ಶನ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ನೀನು ಕಪ್ಪಾಗಿ, ವಿಚಿತ್ರವಾಗಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

'ಮುನಿಕೃಷ್ಣಪ್ಪನವರು ಮನಸ್ಸಿಗೆ ಬಂದ ಹಾಗೆ ನನ್ನನ್ನು ಥಳಿಸಿದರು. ಹಲ್ಲೆ ಮಾಡಿದ ಬಳಿಕ ದೇವಸ್ಥಾನದೊಳಗಿನಿಂದ ಧರಧರನೆ ಎಳೆದುಕೊಂಡು ಹೊರ ಹಾಕಿದ್ದಾರೆ. ತಲೆ ಕೂದಲು ಹಿಡಿದು ಮನಸೋಇಚ್ಛೆ ಥಳಿಸಿದರು. ದೇವಸ್ಥಾನದ ಅರ್ಚಕರು ನನ್ನ ಸಹಾಯಕ್ಕೆ ಬಂದಾಗ ಮುನಿಕೃಷ್ಣಪ್ಪನವರು ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಹಲ್ಲೆ ಮಾಡಿದ್ದಾರೆ. ಆ ಬಳಿಕ ನನ್ನನ್ನು ದೇವಸ್ಥಾನದಿಂದ ಹೊರ ಹಾಕಿದರು. ಇದಾದ ಮೇಲೆ, ಈ ವಿಷಯವನ್ನು ಯಾರಿಗಾದ್ರೂ ಹೇಳಿದ್ರೆ ನಿನ್ನ ಮತ್ತು ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು' ಎಂದು ಮಹಳೆ ವಿವರಿಸಿದ್ದರು.

'ಹಣ ಬಲ ಇರುವವರಿಗೆ ಹೆದರಿ ನಾನು ಯಾರಿಗೂ ಈ ಸಂಗತಿ ಹೇಳಿರಲಿಲ್ಲ. ಈ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ನಮಗೆ ಪೊಲೀಸರು ರಕ್ಷಣೆ ನೀಡುತ್ತಾರೆ ಎಂದು ಧೈರ್ಯ ತುಂಬಿದ ಬಳಿಕ ನಾನು ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದೇನೆ. ಗಂಡನಿಗೆ ಹಾನಿಯಾಗದಂತೆ ಮತ್ತು ನನಗೆ ನ್ಯಾಯ ಒದಗಿಸಿಕೊಡಿ' ಎಂದು ಪೊಲೀಸರಿಗೆ ಸಂತ್ರಸ್ತ ಮಹಿಳೆ ನಿನ್ನೆ ದೂರಿನ ಮೂಲಕ ಮನವಿ ಮಾಡಿದ್ದರು.

ಸಿಸಿಟಿವಿ ದೃಶ್ಯದಲ್ಲೇನಿತ್ತು?:ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲ, ಆ ವ್ಯಕ್ತಿಯು ಮಹಿಳೆಯನ್ನು ಧರಧರನೆ ಎಳೆದು ಗುಡಿಯೊಳಗಿನಿಂದ ಹೊರ ಹಾಕುತ್ತಿರುವುದನ್ನು ಕಾಣಬಹುದು. ದೇಗುಲದ ಹೊರಭಾಗದಲ್ಲಿ ಕಬ್ಬಿಣದ ರಾಡ್​ನಿಂದ ಹಲ್ಲೆಗೆ ಮುಂದಾದಾಗ ಅರ್ಚಕರು ಮಹಿಳೆಯ ಸಹಾಯಕ್ಕೆ ಬಂದಿದ್ದರು.

ಇದನ್ನೂ ಓದಿ:ಬೆಂಗಳೂರಿನ ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ; ದೂರು-ಪ್ರತಿ ದೂರು ದಾಖಲು

ABOUT THE AUTHOR

...view details