ಬೆಂಗಳೂರು: ಸೋಂಕಿತರನ್ನು ಕ್ವಾರಂಟೈನ್ ಮಾಡಲು ತೆರಳಿದ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೊಪಿಯನ್ನ ಬಂಧಿಸುವಲ್ಲಿ ಜೆ.ಜೆನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿ ಸೈಯದ್ ಪರವೇಜ್ ಪಾಷ ಪರಾರಿಯಾಗಿದ್ದ. ಈತ ಚಿಂತಾಮಣಿಯಲ್ಲಿ ಇರುವ ಮಾಹಿತಿ ಮೇರೆಗೆ ನಗರ ಪೊಲೀಸರು ತೆರಳಿ ಈತನನ್ನು ಬಂಧಿಸಿದ್ದಾರೆ.
ಪಾದರಾಯನಪುರ ಬಳಿ ಕೊರೊನಾ ವಾರಿಯರ್ ಮೇಲೆ ಗಲಾಟೆ ಮಾಡಿ, ಸ್ಥಳದಲ್ಲಿ ಸೀಲ್ಡೌನ್ ಇದ್ದರೂ ಕೂಡ ತಗಡು ಮುರಿದು ಆರೋಪಿಗಳು ಗಲಭೆ ಸೃಷ್ಟಿ ಮಾಡಿದ್ದರು. ಈ ಪ್ರಕರಣ ಬಹಳ ಗಂಭೀರತೆ ಪಡೆದು ಪ್ರಕರಣದಲ್ಲಿ ಕಾರ್ಪೋರೇಟರ್ ಸೇರಿದಂತೆ ಹಲವರನ್ನ ಬಂಧನಕ್ಕೊಳಪಡಿಸಲಾಗಿತ್ತು.
ಸದ್ಯ ಬಂಧಿತ ಆರೋಪಿ ಗಲಭೆಯಾದಾಗ ಸಿಕ್ಕ ಸಿಕ್ಕ ವಸ್ತುಗಳನ್ನ ಪುಡಿ ಪುಡಿ ಮಾಡಿ ದಾಂಧಲೆ ಸೃಷ್ಟಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಈತ ಕೂಡ ಪ್ರಮುಖ ಆರೋಪಿಯಾಗಿದ್ದು, ಸದ್ಯ ಪಶ್ಚಿಮ ವಿಭಾಗ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.