ಬೆಂಗಳೂರು :ಪ್ರವಾಹದಿಂದ ತತ್ತರಿಸಿರುವ ಅಸ್ಸೋಂ ರಾಜ್ಯಕ್ಕೆ ತುರ್ತು ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಅಸ್ಸೋಂ ಸಿಎಂ ಸರ್ಬಾನಂದ ಸೋನೊವಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಕೃತಜ್ಞತಾ ಪತ್ರವನ್ನು ಬರೆದಿರುವ ಅವರು, ಅಸ್ಸೋಂನ ಜನತೆ ಬಗ್ಗೆ ಕಾಳಜಿ ವಹಿಸಿರುವುದಕ್ಕೆ ಪತ್ರದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. ರಾಜ್ಯದ ಎಲ್ಲಾ ಸಚಿವರು, ಸಂಸದರು ಮತ್ತು ಶಾಸಕರು ಸಕ್ರಿಯವಾಗಿ ಪ್ರವಾಹ ಪೀಡಿತರ ರಕ್ಷಣೆ ಹಾಗೂ ಅವರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ತೊಡಗಿದ್ದಾರೆ.
ನಾನು ಖುದ್ದಾಗಿ ಕೆಎನ್‌ಪಿ ಪಾರ್ಕ್ ಸೇರಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅವಲೋಕಿಸಿದ್ದೇನೆ. ಜನತೆಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಸೋನೊವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಸ್ಸೋಂ ಸಿಎಂ ದೇವೇಗೌಡರಿಗೆ ಬರೆದಿರುವ ಪತ್ರ ಅಸ್ಸೋಂ ರಾಜ್ಯ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಜತೆ ಜತೆಯಾಗಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಹೆಗಲಿಗೆ ಹೆಗಲು ನೀಡಿದ್ದಾರೆ. ಪರಿಸ್ಥಿತಿಯ ಕುರಿತು ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಯ ಸವಾಲನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರವು ಸಹಕಾರ ನೀಡುತ್ತಿದೆ. ತಾವು ರಾಜ್ಯದ ಪರಿಸ್ಥಿತಿ ಕುರಿತು ಕಾಳಜಿ ವಹಿಸಿ ಪ್ರಧಾನಿಗಳ ಗಮನ ಸೆಳೆದಿರುವುದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ನಿನ್ನೆ ಪ್ರವಾಹದ ವಿಚಾರವಾಗಿ ಪ್ರಧಾನ ಮಂತ್ರಿ ಅವರಿಗೆ ಮಾಧ್ಯಮ ಪ್ರಕಟಣೆ ಮುಖಾಂತರ ಅಸ್ಸೋಂಗೆ ತಕ್ಷಣ ನೆರವು ನೀಡಬೇಕೆಂದು ಒತ್ತಾಯಿಸಿದ್ದರು.