ಬೆಂಗಳೂರು : ಈ ಬಾರಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಟಿಕೆಟ್ ಕೈ ತಪ್ಪುವ ಹಲವು ಶಾಸಕರು ಆತಂಕಕ್ಕೆ ಒಳಗಾಗಿದ್ದು, ಇಂದು ಬೆಳಗ್ಗೆಯಿಂದಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ನಿವಾಸದ ಕದವನ್ನು ಟಿಕೆಟ್ ಲಾಬಿಗಾಗಿ ತಟ್ಟಿದ್ದಾರೆ. ಆತಂಕದಲ್ಲಿರುವ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಮೂಡಿಗೆರೆ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಬಸವನಬಾಗೇವಾಡಿ ಕ್ಷೇತ್ರದ ಆಕಾಂಕ್ಷಿ ಎಸ್.ಕೆ ಬೆಳ್ಳುಬ್ಬಿ ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಬಿಎಸ್ವೈ ಅವರ ಅಧಿಕೃತ ನಿವಾಸವಾದ ಕಾವೇರಿಗೆ ಆಗಮಿಸಿದ ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕವಾಗಿ ಒಬ್ಬೊಬ್ಬ ನಾಯಕರು ಟಿಕೆಟ್ ವಿಚಾರದಲ್ಲಿ ಮಾತುಕತೆ ನಡೆಸಿ ಇದೊಂದು ಬಾರಿ ಅವಕಾಶ ಸಿಗುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇವರ ಜೊತೆ ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಿಂದ ಅವರ ಕುಟುಂಬಕ್ಕೆ ಟಿಕೆಟ್ ಮಿಸ್ ಆಗಲಿದೆ ಎನ್ನಲಾಗಿದ್ದು, ಆಕಾಂಕ್ಷಿಯಾಗಿರುವ ಚನ್ನಗಿರಿ ನಗರದ ಮಾಜಿ ಅಧ್ಯಕ್ಷ ಮಂಜುನಾಥ ಜಾಧವ್ ಅವರು ಕೂಡ ಬಿಎಸ್ವೈ ಅವರನ್ನು ಭೇಟಿ ಮಾಡಿ ಟಿಕೆಟ್ ಕುರಿತು ಮಾತುಕತೆ ನಡೆಸಿದರು.