ಕರ್ನಾಟಕ

karnataka

ETV Bharat / state

4 ವರ್ಷದ ಬಳಿಕ ಕೆಎಎಸ್ ನೇಮಕಾತಿ: ಕೇವಲ 43 ಹುದ್ದೆಗಳ ಭರ್ತಿಗೆ ಮುಂದಾಗಿದ್ದಕ್ಕೆ ಆಕಾಂಕ್ಷಿಗಳಿಂದ ಆಕ್ಷೇಪ - ಕೆಎಎಸ್

43 ಕೆಎಎಸ್ ಹುದ್ದೆಗಳ ಭರ್ತಿಗೆ ಕೆಪಿಎಸ್​ಸಿ ಮುಂದಾಗಿರುವುದಕ್ಕೆ ಉದ್ಯೋಗಾಕಾಂಕ್ಷಿಗಳು ಅಸಮಾಧಾನಗೊಂಡು, ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೆಎಎಸ್​ ಹುದ್ದೆಗಳ ಭರ್ತಿ
ಕೆಎಎಸ್​ ಹುದ್ದೆಗಳ ಭರ್ತಿ

By

Published : Nov 11, 2022, 8:01 PM IST

ಬೆಂಗಳೂರು: ರಾಜ್ಯದಲ್ಲಿ ಸುಮಾರು 200ಕ್ಕೂ ಹೆಚ್ಚು ಕರ್ನಾಟಕ ಆಡಳಿತಾತ್ಮ ಸೇವೆ (ಕೆಎಎಸ್) ಹುದ್ದೆಗಳು​ ಖಾಲಿಯಿದ್ದರೂ ಕೇವಲ 43 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ಕ್ಕೆ ಸರ್ಕಾರ ಸೂಚನೆ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಕೆಎಎಸ್ ಹುದ್ದೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಕೇವಲ 43 ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ಇದರಿಂದ ಮತ್ತಷ್ಟು ವರ್ಷ ವಿದ್ಯಾರ್ಥಿಗಳನ್ನು ನಿರುದ್ಯೋಗಿಗಳನ್ನಾಗಿಯೇ ಮುಂದುವರೆಸಲು ಸರ್ಕಾರ ತೀರ್ಮಾನಿಸಿದಂತಿದೆ ಎಂದು ಕಳೆದ ನಾಲ್ಕು ವರ್ಷಗಳಿಂದ ಸಿದ್ಧತೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿ ಸಂತೋಷ್ ಎಂಬುವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

2017-18ನೇ ಸಾಲಿನಲ್ಲಿ ಕೇವಲ 106 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಪೂರ್ವಭಾವಿ ಪರೀಕ್ಷೆಗೆ ಸುಮಾರು 1.67 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ, ಇದೀಗ 43 ಹುದ್ದೆಗಳನ್ನು ಮಾತ್ರ ಭರ್ತಿ ಮಾಡುತ್ತಿದ್ದು, 8 ಲಕ್ಷಕ್ಕೂ ಹೆಚ್ಚು ಮಂದಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರದಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಡಿಪಿಆರ್ ಅಧಿಕಾರಿಗಳಿಗೆ ಮನವಿ:ಕಳೆದ ನಾಲ್ಕು ವರ್ಷಗಳಿಂದ ಕೆಎಎಸ್ ಹುದ್ದೆಗಳ ಭರ್ತಿ ಮಾಡಿಲ್ಲ. ಹೀಗಾಗಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್​ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ(ಡಿಪಿಆರ್​) ಅಧಿಕಾರಿಗಳಿಗೆ ಹಲವು ಮಂದಿ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದಾರೆ.

ಅಲ್ಲದೇ, ಕಳೆದ ನಾಲ್ಕು ವರ್ಷಗಳಿಂದ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ಸಾವಿರಾರು ಆಕಾಂಕ್ಷಿಗಳ ವಯೋಮಿತಿ ಮೀರುತ್ತಿದೆ. ಆದ್ದರಿಂದ ಕನಿಷ್ಠ ಎರಡು ವರ್ಷಗಳ ಕಾಲ ವಯೋಮಿತಿ ಸಡಿಲಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ಸೂಚನೆಯಂತೆ ಡಿಪಿಆರ್​ ಕೆಲಸ ಮಾಡಲಿದೆ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಉದ್ಯೋಗಾಕಾಂಕ್ಷಿಗಳು ವಿವರಿಸಿದ್ದಾರೆ.

ಮುಂದಿನ 15 ದಿನದಲ್ಲಿ ಅಧಿಸೂಚನೆ: ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಸಂಬಂಧ ಪ್ರತಿಕ್ರಿಯಿಸಿದ ಕೆಪಿಎಸ್ಸಿ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ 43 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವಂತೆ ಸೂಚನೆ ಬಂದಿದೆ. ಆದರೆ, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಸೂಚನೆ ನೀಡಿಲ್ಲ.

ಈ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಇರುವ ಗೊಂದಲಗಳನ್ನು ಸರಿ ಪಡಿಸಿಕೊಳ್ಳಬೇಕಾಗಿದೆ. ಹೀಗಾಗಿ ಡಿಪಿಆರ್ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದೇನೆ. ಸಭೆ ನಡೆಸಿದ ಬಳಿಕ ಅಧಿಸೂಚನೆ ಸಿದ್ಧಪಡಿಸಿ, ಮುಂದಿನ 15 ದಿನದಲ್ಲಿ ಹೊರಡಿಸಲು ಕ್ರಮ ವಹಿಸಲಾಗುವುದು ಎಂದು ಈಟಿವಿ ಭಾರತ್​ಗೆ ಸ್ಪಷ್ಟ ಪಡಿಸಿದರು.

(ಓದಿ: ಪೊಲೀಸ್ ಕಾನ್ಸ್‌ಟೇಬಲ್‌ ನೇಮಕಾತಿ: ವಯೋಮಿತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ)

ABOUT THE AUTHOR

...view details