ಬೆಂಗಳೂರು:ರಾಜ್ಯ ಬಿಜೆಪಿ ಪಾಳಯದಲ್ಲಿ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಸದ್ಯದ ಮಟ್ಟಿಗೆ ಪ್ರತ್ಯೇಕ ಶಕ್ತಿ ಕೇಂದ್ರದಂತಾಗಿದೆ. ಪದೇಪದೆ ಸಚಿವಾಕಾಂಕ್ಷಿಗಳು ಸಭೆ ನಡೆಸೋ ಮೂಲಕ ಸಂಚಲನ ಮೂಡಿಸುತ್ತಿದೆ.
ಸದಾಶಿವನಗರದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಸ್ಥಾನದ ಆಕಾಂಕ್ಷಿಗಳಾದ ಶಿವರಾಜ್ ಪಾಟೀಲ್, ರಾಜುಗೌಡ, ಸಿ.ಪಿ ಯೋಗೇಶ್ವರ್ ಹಾಗೂ ಪ್ರತಾಪ್‌ಗೌಡ ಪಾಟೀಲ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು.
ದೆಹಲಿಯಿಂದ ವಾಪಸ್ಸಾದ ಬೆನ್ನಲ್ಲೇ ಆಕಾಂಕ್ಷಿಗಳ ತಂಡ ಜಾರಕಿಹೊಳಿ ನಿವಾಸಕ್ಕೆ ದೌಡಾಯಿಸಿದ್ದು, ಬಿಜೆಪಿ ಪಾಳಯದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ. ಕೇವಲ ಸಂಪುಟ ವಿಸ್ತರಣೆಯಾದಲ್ಲಿ ರಾಜೀನಾಮೆ ಕೊಟ್ಟು ಬಂದವರಿಗೆ ಮಾತ್ರ ಅವಕಾಶ ಸಿಗಲಿದೆ.
ಹೊಸಬರಿಗೆ ಅವಕಾಶ ಸಿಕ್ಕಲ್ಲ. ಹಾಗಾಗಿ, ಪುನರ್ರಚನೆಯೇ ಸೂಕ್ತ. ಒಂದು ವೇಳೆ ಪುನರ್ರಚನೆ ಆದಲ್ಲಿ ತಮ್ಮನ್ನೂ ಪರಿಗಣಿಸಬೇಕು ಎನ್ನುವ ಮನವಿಯನ್ನು ಸಚಿವ ಸ್ಥಾನದ ಆಕಾಂಕ್ಷಿಗಳು, ರಮೇಶ್ ಜಾರಕಿಹೊಳಿ ಮೂಲಕ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ತಲುಪಿಸುವ ಪ್ರಯತ್ನ ನಡೆಸಿದರು.
ಈಗಾಗಲೇ ಬಿಜೆಪಿ ಕಚೇರಿ, ಸಿಎಂ ನಿವಾಸಕ್ಕೆ ಅಲೆದಾಡಿರುವ ಆಕಾಂಕ್ಷಿಗಳು, ಇದೀಗ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪದೇಪದೆ ಜಾರಕಿಹೊಳಿ ನಿವಾಸದಲ್ಲಿ ಶಾಸಕರು, ಸಚಿವಾಕಾಂಕ್ಷಿಗಳು ಸೇರುವುದು. ಭೋಜನ ಕೂಟ, ಉಪಹಾರ ಕೂಟದ ನೆಪದಲ್ಲಿ ಸಭೆಗಳನ್ನು ನಡೆಸುತ್ತಿದ್ದು, ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸುತ್ತಿದೆ. ಜಾರಕಿಹೊಳಿ ನಿವಾಸ ಪ್ರತ್ಯೇಕ ಶಕ್ತಿ ಕೇಂದ್ರವಾಗುತ್ತಿದೆಯಾ? ಎನ್ನುವ ಅನುಮಾನವೂ ಹುಟ್ಟುಹಾಕಿದೆ.