ಕರ್ನಾಟಕ

karnataka

ETV Bharat / state

ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ರೌಡಿಯಂತೆ ಹಲ್ಲೆ ನಡೆಸಿದ್ದ ಎಎಸ್ಐ ಅಮಾನತು - ರೌಡಿಯಂತೆ ಹಲ್ಲೆ ನಡೆಸಿದ್ದ ಎಎಸ್ಐ ಅಮಾನತು

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ರೌಡಿಯಂತೆ ಅಬ್ಬರಿಸಿದ್ದ ಎಎಸ್ಐ ಅಮಾನತು ಮಾಡಿ ಆದೇಶಿಸಲಾಗಿದೆ.

ASI suspended
ಮಾರಕಾಸ್ತ್ರದಿಂದ ಇಬ್ಬರ ಮೇಲೆ ರೌಡಿಯಂತೆ ಹಲ್ಲೆ ನಡೆಸಿದ್ದ ಎಎಸ್ಐ ಅಮಾನತು

By ETV Bharat Karnataka Team

Published : Nov 4, 2023, 2:38 PM IST

ಬೆಂಗಳೂರು:ಮಾರಕಾಸ್ತ್ರ ಹಿಡಿದು ಯುವಕರಿಬ್ಬರ ಮೇಲೆ ಹಲ್ಲೆ ಮಾಡಿದ್ದ ಮಾಗಡಿ ರೋಡ್ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಅವರನ್ನ ಅಮಾನತು ಮಾಡಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

ಅಕ್ಟೋಬರ್ 25ರಂದು ರಾತ್ರಿ ವಿಜಯ ನಗರದ ಆರ್.ಪಿ.ಸಿ ಲೇಔಟ್ 6ನೇ ಮುಖ್ಯರಸ್ತೆಯಲ್ಲಿ ದಯಾನಂದ್ ಹಾಗೂ ಶಶಿಧರ್ ಎಂಬುವವರ ಮೇಲೆ ಸಹಾಯಕ ಸಬ್​ ಇನ್ಸ್​​ಪೆಕ್ಟರ್​ ಶ್ರೀನಿವಾಸ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಹಲ್ಲೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅವತ್ತು ನಡೆದಿದ್ದೇನು?:ಅಕ್ಟೋಬರ್ 25ರಂದು ರಾತ್ರಿ 10.30ರ ಸುಮಾರಿಗೆ ಆರ್.ಪಿ.ಸಿ ಲೇಔಟ್​ನ ತೇಜಸ್ವಿನಿ ಬಾರ್ ನಲ್ಲಿ ಮದ್ಯಪಾನ ಮಾಡುತ್ತಿದ್ದ ದಯಾನಂದ್, ಶಶಿಧರ್ ಎಂಬುವವರನ್ನ ಆನಂದ್ ಎಂಬಾತ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ. ಇದಕ್ಕೆ ಪ್ರತಿಯಾಗಿ ''ಯಾರು ನೀನು, ನಮ್ಮನ್ನು ಯಾಕೆ ಬೈಯುತ್ತಿರುವೆ? ಯಾವ ಏರಿಯಾ ನಿಂದು?'' ಎಂದು ಆನಂದ್​ನನ್ನು ದಯಾನಂದ್ ಪ್ರಶ್ನಿಸಿದ್ದ. ''ನಂದು ಇದೇ ಏರಿಯಾ'' ಎಂದು ಆನಂದ್ ಉತ್ತರಿಸಿದಾಗ, ''ನಿನ್ನನ್ನ ಈ ಏರಿಯಾದಲ್ಲಿ ನೋಡಿಲ್ವಲ್ಲ?'' ಎಂದು ದಯಾನಂದ್ ಮರು ಪ್ರಶ್ನೆ ಮಾಡಿದ್ದರು. ಆಗ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಶಿಧರ್​ ''ಬೇಕಾದ್ರೆ ಬಾ ಮನೆ ತೋರಿಸ್ತಿನಿ'' ಎಂದಿದ್ದ ಆನಂದ್, ತನ್ನದೇ ಆಟೋದಲ್ಲಿ ಬಲವಂತವಾಗಿ ದಯಾನಂದ್ ಹಾಗೂ ಶಶಿಧರ್ ನನ್ನ ಕೂರಿಸಿಕೊಂಡು ತನ್ನ ಚಿಕ್ಕಪ್ಪ ಎಎಸ್ಐ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದ.

ನಂತರ ಆಟೋದಿಂದ ಇಳಿದವನೇ ''ಇವರಿಬ್ಬರು ಕಳ್ಳರು‌, ಚಿಕ್ಕಪ್ಪ ಬೇಗ ಬನ್ನಿ' ಎಂದು ಕೂಗಲು ಆರಂಭಿಸಿದ್ದ. ತಕ್ಷಣ ಒಂದು ಕೈಯಲ್ಲಿ ಮಾರಕಾಸ್ತ್ರ, ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಓಡಿ ಬಂದಿದ್ದ ಎಎಸ್​ಐ ಶ್ರೀನಿವಾಸ್, ಏನು ಎತ್ತ ಎನ್ನುವುದನ್ನು ಪ್ರಶ್ನಿಸುವುದನ್ನು ಬಿಟ್ಟು ನಡು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ಮಾಡಲಾರಂಭಿಸಿದ್ದ. ನಂತರ ಅಪ್ಪನ ರೌಡಿಸಂಗೆ ಮಗ ಮತ್ತು ಮಗಳು ಸಹ ಸಾಥ್ ನೀಡಿದ್ದರು, ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ‌ ಸೆರೆಯಾಗಿದ್ದವು.

ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಠಾಣೆಯ ಹೊಯ್ಸಳ ಸಿಬ್ಬಂದಿ, ಶ್ರೀನಿವಾಸ್ ಅಟ್ಟಹಾಸಕ್ಕೆ ಸಿಕ್ಕಿ ನಲುಗಿದ್ದ ದಯಾನಂದ್ ಹಾಗೂ ಶಶಿಧರ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಶ್ರೀನಿವಾಸ್ ನಾಪತ್ತೆಯಾಗಿದ್ದರು. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಡಿಸಿಪಿ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಇದನ್ನೂ ಓದಿ:ಜಾಲತಾಣದಲ್ಲಿ ಜಾತಿ ನಿಂದನೆ ಪ್ರಕರಣ : ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು

ABOUT THE AUTHOR

...view details