ಬೆಂಗಳೂರು: ಉದ್ಯಮಿಗೆ ಲಂಚದ ಬೇಡಿಕೆಯಿಟ್ಟು ಹಣ ಪಡೆದ ಆರೋಪದಡಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ದಯಾನಂದ ಸ್ವಾಮಿಯನ್ನು ಅಮಾನತು ಮಾಡಿ ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ) ತನಿಖೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶಿಫಾರಸು ಮಾಡಿದ್ದಾರೆ.
ಉದ್ಯಮಿ ಭರತ್ ಶೆಟ್ಟಿ ಎಂಬುವರು ಇತ್ತೀಚೆಗೆ ನಗರ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಗೂ ಎಸಿಬಿಗೆ ದೂರು ನೀಡಿದ್ದರು. ಆಂತರಿಕ ತನಿಖೆ ನಡೆಸಿ ಪ್ರಾಥಮಿಕ ತನಿಖಾ ವರದಿಯನ್ನು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಕಮೀಷರ್ ನೀಡಿದ ಮೇರೆಗೆ ಮೇಲ್ನೋಟಕ್ಕೆ ಎಎಸ್ಐ ತಪ್ಪಿತಸ್ಥ ಎಂದು ಕಂಡುಬಂದಿದ್ದರಿಂದ ಸಸ್ಪೆಂಡ್ ಮಾಡಿ ಎಸಿಬಿ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಉದ್ಯಮಿ ಭರತ್ ಶೆಟ್ಟಿ ಮೇಲೆ ವಂಚನೆ ಹಾಗೂ ಹಲ್ಲೆ ಕೇಸ್ ದಾಖಲಾಗಿದ್ದು, ಪ್ರಕರಣದಿಂದ ಮುಕ್ತಗೊಳಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ದಯಾನಂದ ಸ್ವಾಮಿಗೆ 5 ಲಕ್ಷ ಲಂಚ ಪಡೆದಿದ್ದರು. ಅಧಿಕಾರದ ಪ್ರಭಾವ ಬಳಸಿ ಉದ್ದೇಶಪೂರ್ವಕವಾಗಿವಾಗಿ ಪ್ರಕರಣ ದಾಖಲಿಸಿ ಬೆದರಿಸಿ ಹಣ ಸುಲಿಗೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಭರತ್, ಎಎಸ್ಐ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಎಸಿಬಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿದಾಗ ಎಎಸ್ಐ ಮೇಲೆ ಬಂದ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
ಓದಿ:ದಿನಗೂಲಿ ನೌಕರರಿಗೂ ತುಟ್ಟಿಭತ್ಯೆ-ವೇತನ ಸಹಿತ ರಜೆ ಅನ್ವಯ : ಹೈಕೋರ್ಟ್ ಆದೇಶ