ಬೆಂಗಳೂರು : ಕೇಂದ್ರ ಸರ್ಕಾರವು ದೇಶದ ಜನರ ಹೃದಯದಲ್ಲಿ ವಿಶ್ವಾಸ ಸ್ಥಾಪಿಸುವುದರೊಂದಿಗೆ ಭಾರತದ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ವಿನ್ಯಾಸಗೊಳಿಸುವ ಮನೋಭಾವನೆಯನ್ನು ರೂಪಿಸಿದೆ ಎಂದು ಕೇಂದ್ರ ರೈಲ್ವೆ, ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಜಿ 20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯ ಎರಡನೇ ದಿನದಲ್ಲಿ ಭಾಗವಹಿಸಿ ಗ್ಲೋಬಲ್ ಸ್ಟಾರ್ಟಪ್‌ನ ಸದಸ್ಯ ರಾಷ್ಟ್ರಗಳ 30 ವ್ಯಕ್ತಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, " ಭಾರತವು ಇಂದು ಎಲ್ಲ ಕ್ಷೇತ್ರಗಳಲ್ಲಿ ಹೊಸತನದ ಜಾಗೃತಿಯನ್ನು ಪಡೆದುಕೊಂಡಿದೆ. ಇಡೀ ಜಗತ್ತನ್ನು ನಾವುಗಳು ವಿನ್ಯಾಸಗೊಳಿಸುತ್ತಿರುವಾಗ, ನಮಗಾಗಿ ಏಕೆ ಬದಲಾವಣೆ ತರಲು ಸಾಧ್ಯವಿಲ್ಲ ಎನ್ನುವ ಚಿಂತನೆ ಮೂಲ ಬದಲಾವಣೆಗೆ ಕಾರಣವಾಗಿದೆ " ಎಂದು ಅಭಿಪ್ರಾಯಪಟ್ಟರು.
" ಈ ಬಾರಿಯ ಶೃಂಗಸಭೆಗಳಲ್ಲಿ 'ಗುಣಮಟ್ಟ' ಪ್ರಮುಖ ಚರ್ಚೆಯ ವಿಷಯವಾಗಿದೆ. ಇದನ್ನು ಇನ್ನು ಮುಂದೆ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಜಿ 20 ಸಭೆಯ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬೇಕಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಶೃಂಗಸಭೆಯ ಕಲಾಪಗಳು ಕೇವಲ ಉಪನ್ಯಾಸಗಳಿಗೆ ಸೀಮಿತವಾಗದೇ ಹಲವು ವೇದಿಕೆಗಳ ಮುಖಾಂತರ ಪ್ರತಿಭಾವಂತರಿಗೆ ಅವಕಾಶ ನೀಡುವ ಕೆಲಸವಾಗುತ್ತಿದೆ. ಯುಪಿಐ ಮತ್ತು ಆಧಾರ್ ನಂತಹ ವೇದಿಕೆಗಳ ಮೂಲಕ ಡಿಜಿಟಲ್ ತಂತ್ರಜ್ಞಾನದ ಲಾಭ ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡಲು ದೇಶ ಯಶಸ್ವಿಯಾಗಿದೆ. ದೇಶದಲ್ಲಿ ನವೋದ್ಯಮವು ಚಿಂತನೆ ಗಡಿ ಮೀರಿ ಬೆಳೆಯುತ್ತಿದೆ " ಎಂದು ಹೇಳಿದರು.
ಇದನ್ನೂ ಓದಿ :ಭಾರತದಲ್ಲಿ ನಡೆಯುವ ಜಿ - 20 ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಕುರಿತು ಚರ್ಚೆ : ಅಮೆರಿಕ