ಬೆಂಗಳೂರು: ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಡಪೆಯಾಗಿ ಪಕ್ಷದ ಸದಸ್ಯತ್ವ ಪಡೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅಶ್ವತ್ಥನಾರಾಯಣ್, ಸೈಲೆಂಟ್ ಸುನಿಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಅವರು ಪಾರ್ಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.
ಈಗಾಗಲೇ ಸೈಲೆಂಟ್ ಸುನಿಲ್ ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲವೆಡೆ ಪೋಸ್ಟರ್ಗಳು ಕಾಣುತ್ತಿವೆ. ಸೈಲೆಂಟಾಗಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿ ಸ್ಪರ್ಧೆಗಿಳಿಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಳೆದ ಬಾರಿ ಚಾಮರಾಜಪೇಟೆ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಣಿಸಿಕೊಂಡಿದ್ದರು. ಆಗಾಲೇ ಸೈಲೆಂಟ್ ಸುನಿಲ್ ಬಿಜೆಪಿಯಿಂದ ಚಾಮರಾಜಪೇಟೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ಕಾಂಗ್ರೆಸ್, ಬಿಜೆಪಿ ರೌಡಿಗಳ ಪಕ್ಷ ಎಂದು ವಾಗ್ದಾಳಿ ನಡೆಸಿತ್ತು. ಇತ್ತ ಸಾರ್ವಜನಿಕ ವಲಯದಿಂದಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆ ಸಂದರ್ಭ ಸೈಲೆಂಟ್ ಸುನಿಲ್ ಗೂ ನಮಗೂ ಸಂಬಂಧ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.
ರೌಡಿ ಮೋರ್ಚಾಕ್ಕೆ ಬಹಿರಂಗ ಟೀಕೆ - ಕಾಂಗ್ರೆಸ್ ಟೀಕೆ:ಈಗ ಮತ್ತೆ ಸೈಲೆಂಟ್ ಸುನಿಲ್ ಬಿಜೆಪಿ ಶಾಲು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಬಿಜೆಪಿ ಸದಸ್ಯತ್ವ ಇರುವ ಕಾರ್ಡಿನ ಫೋಟೋವು ಹರಿದಾಡುತ್ತಿದೆ. ಈ ಫೋಟೋಗಳನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಪ. ಬಂಗಾಳ, ಕೇರಳದ ಆರ್ಎಸ್ಎಸ್ ಕಚೇರಿಗಳಲ್ಲಿ ಗನ್ನು, ಗ್ರೆನೇಡ್, ಬಾಂಬುಗಳು ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಇನ್ನು ಮುಂದೆ ಲಾಂಗು, ಮಚ್ಚು, ಡ್ರ್ಯಾಗರ್‌ಗಳ ಸಂಗ್ರಹ ಇರಲಿದೆ. ರೌಡಿಗಳಿಗೆ ಬಿಜೆಪಿ ಮೇಲೆ ಪ್ರೀತಿಯೋ, ಬಿಜೆಪಿಗೆ ರೌಡಿಗಳ ಮೇಲೆ ಪ್ರೀತಿಯೋ ಕಟೀಲ್ ಉತ್ತರಿಸಬೇಕು. ಕುಖ್ಯಾತ ಪಾತಕಿ ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ರೌಡಿ ಮೋರ್ಚಾಕ್ಕೆ ಬಹಿರಂಗವಾಗಿ ಚಾಲನೆ ದೊರೆತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.