ಬೆಂಗಳೂರು: ಎಲೆಕ್ಟ್ರಾನಿಕ್ ವಲಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿವಿಧ ಕಂಪನಿಗಳು ರಾಜ್ಯದಲ್ಲಿ 36,804 ಕೋಟಿ ರೂ.ಗಳಷ್ಟು ಭಾರಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ತಮ್ಮ ಉತ್ಪಾದನಾ ಘಟಕಗಳನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆರಂಭಿಸಲಿವೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಬುಧವಾರ ನಗರದಲ್ಲಿ ಆರಂಭವಾದ ಮೂರು ದಿನಗಳ 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರಿನ ಸಾಧನೆ ಅಭೂತಪೂರ್ವವಾಗಿದ್ದು, ಇಡೀ ದೇಶ ಮತ್ತು ಜಗತ್ತು ಕರ್ನಾಟಕದ ರಾಜಧಾನಿಯತ್ತ ನೋಡುತ್ತಿವೆ. ಐಟಿ ಮತ್ತು ಬಿಟಿ ವಲಯದಲ್ಲಿ ಈಗ ನಡೆಯುತ್ತಿರುವ 135 ಶತಕೋಟಿ ಡಾಲರ್ ಮೌಲ್ಯದ ರಫ್ತು ವಹಿವಾಟನ್ನು 2025ರ ಹೊತ್ತಿಗೆ 300 ಶತಕೋಟಿ ಡಾಲರ್ಗಳ ವಹಿವಾಟಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯವು ಸೆಮಿಕಂಡಕ್ಟರ್, ಚಿಪ್, ವಿನ್ಯಾಸ ಇತ್ಯಾದಿ ಕ್ಷೇತ್ರಗಳ ತೊಟ್ಟಿಲಾಗುತ್ತಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗಾಗಲೇ 22,900 ಕೋಟಿ ರೂ. ಮೊತ್ತದ ಹೂಡಿಕೆಗೆ ಒಡಂಬಡಿಕೆ ಆಗಿದೆ. ಐಎಸ್ಎಂಸಿ ಅನಲಾಗ್ ಫ್ಯಾಬ್ ಕಂಪನಿಯ ಈ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಕೊಡಲಾಗಿದೆ. ಇದರ ಫ್ಯಾಬ್ ಸ್ಥಾವರವು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಇದರ ಜತೆಗೆ ಟೆಕ್ರೆನ್, ಎಕ್ಸೈಡ್, ಹಿಟಾಚಿ, ಬಾಶ್ ಕಂಪನಿಗಳ ಹೂಡಿಕೆ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ತಂತ್ರಜ್ಞಾನಾಧಾರಿತ ಉದ್ಯಮಗಳ ಸಮರ್ಥ ಬೆಳವಣಿಗೆಗೆ ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇದೆ. ಡಿಜಿಟಲ್ ಇಂಡಿಯಾದ ಸಾಕಾರವು 140 ಕೋಟಿ ಭಾರತೀಯರಿಗೆ ಶಕ್ತಿ ತುಂಬಲಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಗುರಿ ವಸ್ತುನಿಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ತರಬೇತಿಗೆ ಆದ್ಯತೆ ಕೊಡಲಾಗಿದ್ದು, ಉದ್ಯಮಗಳಿಗೆ ಬೇಕಾದ ನುರಿತ ಮಾನವ ಸಂಪನ್ಮೂಲವನ್ನು ನಿರಂತರವಾಗಿ ಪೂರೈಸುವ ದಕ್ಷ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ನುಡಿದರು.