ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್ಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದ್ದು, ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗದ ಮಾದರಿಯಲ್ಲಿ ಇನ್ಮುಂದೆ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜಿಸಲು ನಿರ್ಧರಿಸಿದೆ. ಇದಕ್ಕಾಗಿ ಮತ್ತಷ್ಟು ರಾಷ್ಟ್ರಗಳ ಜೊತೆ ಮಾತುಕತೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ವರ್ಷದ ಬಿಟಿಎಸ್ನಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಿದೆ.
ವಿಶ್ವದ ಶ್ರೀಮಂತ ಮತ್ತು ಪ್ರಬಲ ರಾಷ್ಟ್ರಗಳ ಆರ್ಥಿಕ ಶೃಂಗಕ್ಕೆ ದಾವೋಸ್ ಹೆಸರುವಾಸಿಯಾಗಿದೆ. 100 ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಈ ಶೃಂಗದಲ್ಲಿ ಭಾಗಿಯಾಗಲಿದ್ದಾರೆ. ಪ್ರತಿ ವರ್ಷ ಜನವರಿ ಅಂತ್ಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ದಾವೋಸ್ ಆರ್ಥಿಕ ಶೃಂಗದಲ್ಲಿ ದೇಶ ದೇಶಗಳ ನಡುವಿನ ಹೂಡಿಕೆ ಕುರಿತ ಒಡಂಬಡಿಕೆಗಳು ನಡೆಯಲಿವೆ. ಹಾಗಾಗಿಯೇ ತಮ್ಮ ತಮ್ಮ ದೇಶಕ್ಕೆ ಹೂಡಿಕೆ ತರಬೇಕು, ಹೂಡಿಕೆದಾರರನ್ನು ಸೆಳೆಯಬೇಕು ಎಂದು ಎಲ್ಲ ದೇಶಗಳು ಪ್ರಯತ್ನ ನಡೆಸುತ್ತಿವೆ ಇದಕ್ಕೆ ಭಾರತವೂ ಹೊರತಲ್ಲ.
ಇದೀಗ ದಾವೋಸ್ ಮಾದರಿಯ ಆರ್ಥಿಕ ಶೃಂಗವನ್ನು ಬೆಂಗಳೂರಿನಲ್ಲೇ ಆಯೋಜಿಸಬೇಕು ಎನ್ನುವ ಚಿಂತನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇದಕ್ಕೆ ಬೆಂಗಳೂರು ಟೆಕ್ ಸಮ್ಮಿಟ್ ಅನ್ನೇ ಬಳಸಿಕೊಳ್ಳಲು ನಿರ್ಧರಿಸಿದೆ. ಜನವರಿಯಲ್ಲಿ ದಾವೋಸ್ನಲ್ಲಿ ನಡೆದಿದ್ದ ಜಾಗತಿಕ ಸಿಇಒಗಳ ಸಮಾವೇಶದಲ್ಲಿ ಭಾರತದ 100ಕ್ಕೂ ಅಧಿಕ ಸಿಇಒಗಳು ಮತ್ತು ಉದ್ಯಮ ನಾಯಕರು ಭಾಗಿಯಾಗಿದ್ದರು. ಒಟ್ಟು 100ಕ್ಕಿಂತ ಅಧಿಕ ರಾಷ್ಟ್ರಗಳ 3 ಸಾವಿರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಜಾಗತಿಕ ಆರ್ಥಿಕ ವಿದ್ಯಮಾನಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿತ್ತು. ಭಾರತ, ಬ್ರಿಟನ್, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ವಿಶ್ವದ ಶ್ರೀಮಂತ ಮತ್ತು ಪ್ರಬಲ ರಾಷ್ಟ್ರಗಳು ಭಾಗವಹಿಸುವ ಈ ಶೃಂಗದಂತೆ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಆಯೋಜಿಸಬೇಕು ಎನ್ನುವ ಚಿಂತನೆ ಇದೀಗ ರಾಜ್ಯ ಸರ್ಕಾರದ್ದಾಗಿದೆ.