ಕರ್ನಾಟಕ

karnataka

ETV Bharat / state

ಇನ್ಮುಂದೆ ಎಲ್ಲ ಶುಲ್ಕ ಕೆಇಎಯಲ್ಲೇ ಪಾವತಿ: ಸಚಿವ ಅಶ್ವತ್ಥ್​​ ನಾರಾಯಣ - Ashwath Narayana talk about Engineering Course Fees

ಖಾಸಗಿ ಕಾಲೇಜುಗಳು ‘ಇತರೆ ಶುಲ್ಕ’ ನೆಪದಲ್ಲಿ ಮಿತಿಮೀರಿ ಶುಲ್ಕ ಕಟ್ಟಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿ ಗರಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಗೆ ನಿಗದಿಪಡಿಸಲಾಗಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ashwath-narayana
ಡಾ. ಸಿ. ಎನ್​ ಅಶ್ವತ್ಥ್​ ನಾರಾಯಣ

By

Published : Sep 29, 2021, 7:56 PM IST

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಕೋರ್ಸ್​ನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ ಹಿಂದಿನ ದರವನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (ಕೆಯುಪಿಇಸಿಎ) ಮತ್ತು ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ವೃತ್ತಿ ಪರ ಕಾಲೇಜುಗಳ ಸಂಘದ (ಕೆಆರ್​​ಎಲ್ಎಂಪಿಸಿಎ) ಪ್ರತಿನಿಧಿಗಳ ಜತೆ ಬುಧವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು ಎಂದು ಸಚಿವರು ತಿಳಿಸಿದರು.

ಹೀಗಾಗಿ, ಈ ಮುಂಚಿನಂತೆಯೇ ಸರ್ಕಾರಿ ಕೋಟಾದಡಿ ಪ್ರವೇಶಾತಿ ಪಡೆಯುವವರಿಗೆ ರೂ. 65,340, ರೂ 58,806 ಈ ಎರಡು ಸ್ಲ್ಯಾಬ್ ಗಳಲ್ಲಿ ಶುಲ್ಕಗಳು ಮುಂದುವರಿಯಲಿವೆ. ಇದೇ ವೇಳೆ, ಖಾಸಗಿ ಕಾಲೇಜುಗಳು ‘ಇತರೆ ಶುಲ್ಕ’ ನೆಪದಲ್ಲಿ ಮಿತಿಮೀರಿ ಶುಲ್ಕ ಕಟ್ಟಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿ, ಗರಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಕ್ಕೆ ನಿಗದಿಪಡಿಸಲಾಗಿದೆ. ಹಲವು ಕಾಲೇಜುಗಳು ಇತರೆ ಶುಲ್ಕದ ನೆಪದಲ್ಲಿ 70 ಸಾವಿರದವರೆಗೂ ಶುಲ್ಕ ವಸೂಲಿ ಮಾಡುತ್ತಿವೆ ಎನ್ನುವ ಆರೋಪಗಳಿದ್ದು, ಈ ತೀರ್ಮಾನ ಮಾಡಲಾಗಿದೆ. ಇದಕ್ಕೆ ಕಾಲೇಜು ಸಂಘದ ಪ್ರತಿನಿಧಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ವಿವರಿಸಿದರು.

ಇನ್ನು ಮುಂದೆ ಪ್ರವೇಶ ಶುಲ್ಕ, ಇತರೆ ಶುಲ್ಕ, ಕೌಶಲ ಶುಲ್ಕ ಇದ್ಯಾವುದನ್ನೂ ನೇರವಾಗಿ ಕಾಲೇಜಿನಲ್ಲಿ ಕಟ್ಟುವಂತಿಲ್ಲ. ಇವೆಲ್ಲವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿಯೇ ಪಾವತಿಸಬೇಕು. ಟೂಷನ್ ಶುಲ್ಕ‌ ಸೇರಿದಂತೆ ಇತರೆ ಶುಲ್ಕವನ್ನು ಕಟ್ಟಿಸಿಕೊಳ್ಳುವ ಮುನ್ನ ಪ್ರತಿಯೊಂದು ಕಾಲೇಜು ಯಾವ ಯಾವ ಉದ್ದೇಶಕ್ಕೆ ಇದನ್ನು ಕಟ್ಟಿಸಿಕೊಳ್ಳಲಾಗುತ್ತದೆ ಎಂಬುದನ್ನು ಕೆಎಇ ತಾಂತ್ರಿಕ ಶಿಕ್ಷಣ ಇಲಾಖೆ, ವಿಟಿಯು ಗಳಿಗೆ ಮಾಹಿತಿ ಕೊಡಬೇಕು. ಇದನ್ನು ಕಾಲೇಜುಗಳಲ್ಲಿ ಕಟ್ಟಲು ಅವಕಾಶ ಇರುವುದಿಲ್ಲ. ಕೆಇಎಗೇ ಕಟ್ಟಬೇಕು. ಜೊತೆಗೆ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯ ಶುಲ್ಕವನ್ನು ಈ ಮುಂಚೆ ಆಯಾ ಕಾಲೇಜಿನಲ್ಲಿ ಕಟ್ಟಬಹುದಿತ್ತು. ಆದರೆ, ಇನ್ನು ಮುಂದೆ ಅದನ್ನು ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲೇ (ಕೆಇಎ) ಕಟ್ಟಬೇಕು. ಈ ಮುಂಚೆ ಈ ಶುಲ್ಕ ಕಟ್ಟಿಸಿಕೊಳ್ಳುವಲ್ಲಿ ಇದ್ದ ಗೊಂದಲವನ್ನು ನಿವಾರಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕೆಲವು ಕಾಲೇಜುಗಳು ವಿದ್ಯಾರ್ಥಿಗಳನ್ನು ಉದ್ಯಮಗಳಿಗೆ ಸಜ್ಜುಗೊಳಿಸಿ ಅವರ ನೇಮಕಾತಿ ಸಾಧ್ಯತೆ ಹೆಚ್ಚಿಸುವುದಕ್ಕಾಗಿ ನೀಡುತ್ತಿದ್ದ ಹೆಚ್ಚುವರಿ ತರಬೇತಿಗಾಗಿ ‘ಕೌಶಲ ಶುಲ್ಕ’ (ಸ್ಕಿಲ್ ಫೀಸ್) ಕಟ್ಟಿಸಿಕೊಳ್ಳುತ್ತಿದ್ದವು. ಇದು ಐಚ್ಛಿಕವಾಗಿದ್ದು, ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿ ಶುಲ್ಕ ಇರುತ್ತಿತ್ತು. ಈಗ ಇದಕ್ಕೆ ಕೂಡ ಗರಿಷ್ಠ ರೂ. 20,000 ಮಿತಿ ನಿಗದಿಗೊಳಿಸಲಾಗಿದೆ.

ಇದರಲ್ಲಿ 10,000 ರೂ, 15,000 ರೂ ಹಾಗೂ 20,000 ರೂ.. ಹೀಗೆ ಮೂರು ಹಂತಗಳಿರುತ್ತವೆ. ವಿ.ಟಿ.ಯು ತಂಡವು ಕಾಲೇಜುಗಳ ಪರಿಶೀಲನೆ ನಡೆಸಿ ಯಾವ ಕಾಲೇಜಿನಲ್ಲಿ ಎಷ್ಟು ಕಟ್ಟಿಸಿಕೊಳ್ಳಬೇಕು ಎಂದು ನಿಗದಿಗೊಳಿಸಲಿದೆ. ಅದರಂತೆ ಈ ಶುಲ್ಕವನ್ನು ಕೆಇಎ ಗೆ ಕಟ್ಟಬೇಕಾಗುತ್ತದೆ ಎಂದು ವಿವರಿಸಿದರು.

ಇಂಜಿನಿಯರಿಂಗ್ ಕೋರ್ಸ್ ಶುಲ್ಕವನ್ನು ಶೇ. 30 ಹೆಚ್ಚಿಸಲು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದ್ದವು. ವಿಟಿಯು ಕುಲಪತಿ ಕರಿಸಿದ್ದಪ್ಪ ನೇತೃತ್ವದ ಸಮಿತಿಯು ಶೇ. 15ರಿಂದ ಶೇ. 20ರವರೆಗೆ ಹೆಚ್ಚಳ ಮಾಡಬಹುದೆಂದು ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು. ಆದರೆ, ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡದಿರಲು ಖಾಸಗಿ ಕಾಲೇಜುಗಳ ಒಕ್ಕೂಟಗಳ ಮನವೊಲಿಸಲಾಯಿತು ಎಂದರು.

ಕುಪೇಕಾದ ತಾಂತ್ರಿಕ ಸಮಿತಿಯ ಅಧ್ಯಕ್ಷ ಮಂಜುನಾಥ ಭಂಡಾರಿ, ಸದಸ್ಯರಾದ ಚಂದ್ರಶೇಖರ್ ರಾಜು, ರಮೇಶ್ ರಾಜು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಗಣೇಶ್ ಕಾರ್ಣಿಕ್ ಮತ್ತಿತರರು ಇದ್ದರು.

ಇದನ್ನೂ ಓದಿ:ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ: ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ABOUT THE AUTHOR

...view details