ಬೆಂಗಳೂರು: ಮಂಡ್ಯದ ಸಾತನೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಟಿಪ್ಪುವನ್ನು ಹೊಡೆದುಹಾಕಿದ್ದಂತೆ ಹೊಡೆದು ಹಾಕಿ ಎಂದು ಕರೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ ರದ್ದುಕೋರಿ ಮಾಜಿ ಸಚಿವ, ಮಲ್ಲೇಶ್ವರ ವಿಧಾನಸಭಾ ಶಾಸಕ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಸಂಬಂಧಿಸಿದಂತೆ ಸೋಮವಾರ ಹಿರಿಯ ವಕೀಲರಾದ ಲಕ್ಷ್ಮೀ ಅಯ್ಯಂಗಾರ್ ಅವರು, ಅರ್ಜಿಯನ್ನು ಇಂದೇ ವಿಚಾರಣೆಗೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ಮನವಿ ಮಾಡಿದರು.
ಅಲ್ಲದೇ, ಘಟನೆ ನಡೆದು ಕೆಲವು ತಿಂಗಳುಗಳು ಕಳೆದಿವೆ. ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ದೂರು ನೀಡಲಾಗಿದೆ. ಜೊತೆಗೆ ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ ಇಂದು ಮಧ್ಯಾಹ್ನ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಂಗಳವಾರ(ನಾಳೆ)ಗೆ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿಯಲ್ಲಿ ಏನೆಂದು ಕೋರಲಾಗಿದೆ?ಅರ್ಜಿದಾರ ಅಶ್ವತ್ಥ ನಾರಾಯಣ್ ವಿರುದ್ಧ ದಾಖಲಾಗಿರುವ ಪ್ರಕರಣ ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದ್ದು, ಕಾನೂನು ಬಾಹಿರವಾಗಿ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ಬೆದರಿಕೆ, ದಂಗೆ ಉಂಟು ಮಾಡುವುದು, ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿರುವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದಕ್ಕೆ ಸೂಕ್ತ ಪುರಾವೆಗಳು ಇಲ್ಲವಾಗಿದೆ. ಅಲ್ಲದೆ, ದೂರುದಾರರು ಘಟನಾ ಸ್ಥಳದಲ್ಲಿ ಇರಲಿಲ್ಲ. ಅರ್ಜಿದಾರರ ಭಾಷಣದಿಂದ ಈವರೆಗೂ ಯಾವುದೇ ಗಲಭೆ ನಡೆದಿಲ್ಲ. ಅಲ್ಲದೇ ಅರ್ಜಿದಾರರ ಹೇಳಿಕೆಯಿಂದ ಯಾವ ವ್ಯಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಈ ದೂರು ಒಂದು ಕಾಲ್ಪನಿಕವಾಗಿದೆ. ಅರ್ಜಿದಾರರು ಈ ಹೇಳಿಕೆ ನೀಡುವುದಕ್ಕೂ ಮುನ್ನ ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವುದನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅರ್ಜಿದಾರರ ಹೇಳಿಕೆ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಸಿದ್ದರಾಮಯ್ಯ ವಿರುದ್ಧ ಪ್ರಚೋದನೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.