ಕರ್ನಾಟಕ

karnataka

ETV Bharat / state

ಆಶ್ರಯ ಯೋಜನೆ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ: ಹೈಕೋರ್ಟ್ - ’ಹಕ್ಕು ಪತ್ರ

ರಾಜ್ಯ ಸರ್ಕಾರ ಜಾರಿ ಮಾಡಿದ್ದ ಆಶ್ರಯ ಯೋಜನೆ ಜಾರಿ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್​ ತಿಳಿಸಿದೆ.

ashraya-scheme-unenforceable-says-high-court
ಆಶ್ರಯ ಯೋಜನೆ ಜಾರಿ ಮಾಡಲಾಗದು : ಹೈಕೋರ್ಟ್

By ETV Bharat Karnataka Team

Published : Dec 18, 2023, 10:51 PM IST

ಬೆಂಗಳೂರು: ನಿರಾಶ್ರಿತರಿಗೆ ನೆಲೆ ಕಂಡುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿದ್ದ ವಸತಿ ಯೋಜನೆಯಾದ ‘ಆಶ್ರಯ ಯೋಜನೆ’ಯನ್ನು ಜಾರಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಆಶ್ರಯ ಯೋಜನೆಯಡಿ ಹಂಚಿಕೆಯಾದ ನಿವೇಶನಗಳಿಗೆ ’ಹಕ್ಕು ಪತ್ರ’ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ನಿವಾಸಿ ಬಿ.ರೂಪಾ ಸೇರಿದಂತೆ 40 ನಿವಾಸಿಗಳು ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಈ ಸಂಬಂಧ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಮತ್ತು ಹಿಂದುಳಿದ ಅಲ್ಪ ಸಂಖ್ಯಾತರ ಗ್ರಾಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್​, ಸಂವಿಧಾನದ 162ನೇ ವಿಧಿಯ ಅಡಿ ಲಭ್ಯವಾದ ಕಾರ್ಯಕಾರಿ ಅಧಿಕಾರ ಬಳಕೆ ಮಾಡಿ ರಾಜ್ಯ ಸರ್ಕಾರವು ಆಶ್ರಯ ಯೋಜನೆ ರೂಪಿಸಿದೆ. ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಶ್ರಯ ಯೋಜನೆ ರೂಪಿಸಿದೆ. ಇದರಿಂದ ಯೋಜನೆಯನ್ನು ಜಾರಿ ಮಾಡಲಾಗದು ಮತ್ತು ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೇ, ಈ ಕಾನೂನಿನ ಘೋಷಣೆಯು ಗಂಗಾಜಲದಂತೆ ಸ್ಪಷ್ಟವಾಗಿರುವ ಕಾರಣ, ಆಶ್ರಯ ಯೋಜನೆಯಡಿ ಮೇಲ್ಮನವಿದಾರರಿಗೆ ಯಾವುದೇ ಪರಿಹಾರ ಕಲ್ಪಿಸಲಾಗುವುದಿಲ್ಲ ಎಂದು ವಿಭಾಗೀಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ :ಮೈಸೂರು ಕಸಬಾ ಹೋಬಳಿಯ ಶ್ರೀರಾಂಪುರದ ಪಟ್ಟಣ ಪಂಚಾಯತಿ ನಿವಾಸಿಗಳಾದ ಮೇಲ್ಮನವಿದಾರರಾದ ಪ್ರೇಮಾ ಮತ್ತು ಮೈಸೂರಿನ ಇತರ 39 ನಿವಾಸಿಗಳು 2011ರಲ್ಲಿ ಆಶ್ರಯ ಯೋಜನೆಯಡಿ ತಮಗೆ ಮಂಜೂರಾದ ನಿವೇಶನಗಳಿಗೆ ಸಂಬಂಧಿಸಿದಂತೆ ಹಕ್ಕು ಪತ್ರಗಳನ್ನು ನೀಡುವಂತೆ ತಾಲ್ಲೂಕು ಪಂಚಾಯ್ತಿಗೆ ಮನವಿ ಮಾಡಿದ್ದರು. ಆ ಮನವಿಯನ್ನು ತಿರಸ್ಕರಿಸಿ 2019ರ ಫೆ.21ರಂದು ತಾಲೂಕು ಪಂಚಾಯಿತಿ ಪತ್ರ ವ್ಯವಹಾರ ನಡೆಸಿತ್ತು. ಅದನ್ನು ರದ್ದುಪಡಿಸಲು ಮತ್ತು ಹಕ್ಕು ಪತ್ರ ಹಂಚಿಕೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 2019ರಲ್ಲಿ ರೂಪಾ ಮತ್ತಿತರೆ ಫಲಾನುಭವಿಗಳು ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿ 2023ರ ಫೆ.21ರಂದು ಏಕಸದಸ್ಯ ಪೀಠದ ಆದೇಶಿಸಿತ್ತು.

ಶ್ರೀರಾಂಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ 2021ರ ಮಾ.26ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಹೊರಬೀಳುವ ವೇಳೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಇದರಿಂದ ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಮುಂದುವರಿಸಿಲ್ಲ. ಪರಿಣಾಮ ಶ್ರೀರಾಂಪುರ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಫಲಾನುಭವಿಗಳ ಆಯ್ಕೆ ಮತ್ತು ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕಿತ್ತು. ಆದರೆ, ಶ್ರೀರಾಂಪುರ ಗ್ರಾಮ ಪಂಚಾಯಿತಿ ಸದ್ಯ ಅಸ್ತಿತ್ವದಲ್ಲಿ ಇಲ್ಲದ ಕಾರಣ ಆಶ್ರಯ ಯೋಜನೆ ನಿವೇಶನಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿಸುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಇದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಏಕ ಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿದಾರರ ಪರ ವಕೀಲರು, ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡಿರುವುದರಿಂದ ಸಹಜವಾಗಿ ಹಕ್ಕುಪತ್ರ ಹಂಚಿಕೆ ಮಾಡಬೇಕಿದೆ ಎಂದು ವಾದ ಮಂಡಿಸಿದ್ದರು.

ಆದರೆ, ಮೇಲ್ಮನವಿಗೆ ಸಂಬಂಧಿಸಿದ ದಾಖಲೆಗಳ ಮತ್ತು ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಪರಿಶೀಲಿಸಿದ ವಿಭಾಗೀಯ ಪೀಠ, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಜತೆಗೆ, ಏಕ ಸದಸ್ಯ ನ್ಯಾಯಪೀಠದ ಆದೇಶವು ಸೂಕ್ತವಾಗಿದೆ. ಮತ್ತೊಂದೆಡೆ ಆಶ್ರಯ ಯೋಜನೆ ಜಾರಿ ಮಾಡಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹಾಗಾಗಿ, ಮೇಲ್ಮನವಿದಾರರಿಗೆ ಯಾವುದೇ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ವಜಾಗೊಳಿಸಿತು. ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್ ಅಧಿಕಾರಿಗಳನ್ನು ಬಂಧಿಸದ ಹೊರತು ಏನೂ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ :ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣ: ಮೌನ ವಹಿಸಿದ್ದ ಗ್ರಾಮಸ್ಥರಿಗೆ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸಲು ಹೈಕೋರ್ಟ್ ಸಲಹೆ

ABOUT THE AUTHOR

...view details