ಬೆಂಗಳೂರು: ಭಯೋತ್ಪಾದನೆ ಚಟುವಟಿಕೆ ಮಾಡುವುದನ್ನ ನಮ್ಮ ಸರ್ಕಾರ ಮುಲಾಜಿಲ್ಲದೇ ಮಟ್ಟ ಹಾಕುತ್ತದೆ. ದೇಶ ವಿರೋಧಿ ಸಂಚು ಮಾಡಿದವರ ಕೃತ್ಯ ಸಾಬೀತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೊಲೀಸರು ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆ. ಭಯೋತ್ಪಾದಕರ ಕೃತ್ಯ ಎಂದು ಸಾಬೀತಾಗಿದೆ. ಇದರ ಜಾಲ ದೇಶದ ಯಾವೆಲ್ಲ ಭಾಗದಲ್ಲಿ ಇದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ತನಿಖೆ ನಡೆಯುತ್ತಿರುವುದರಿಂದ ಇದರ ಹಿಂದೆ ಯಾರಿದ್ದಾರೆ ಅಂತ ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ಪಿಡುಗನ್ನು ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಗೆಲ್ಲುವ ಸೇಫ್ ಪ್ಲೇಸ್ ಎಲ್ಲೂ ಇಲ್ಲ: ಸಿದ್ದರಾಮಯ್ಯ ಹಾಕಿರುವ ಅರ್ಜಿಯಲ್ಲಿ ಕ್ಷೇತ್ರದ ಉಲ್ಲೇಖ ಆಗದ ವಿಚಾರ ಕುರಿತು ಕರ್ನಾಟಕದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸೇಫ್ ಪ್ಲೇಸ್ ಎಲ್ಲೂ ಇಲ್ಲ. ಅವರು ಬೇರೆ ರಾಜ್ಯ ಹುಡುಕಿಕೊಳ್ಳೋದು ಸೇಫ್. ಅವರು ಹುಟ್ಟಿ, ಬೆಳೆದ ಜಾಗದಲ್ಲಿ ಕೂಡ ಜನ ತಿರಸ್ಕರಿಸಿದ್ದಾರೆ ಎಂದು ಸಚಿವ ಆರ್ ಅಶೋಕ್ ಲೇವಡಿ ಮಾಡಿದರು.
ಬಾದಾಮಿ ಸವಿಯೋಕೆ ಅಂತ ಬಾದಾಮಿಗೆ ಹೋದರು, ಈಗ ಕೋಲಾರದಲ್ಲಿ ಮುನಿಯಪ್ಪ ಕೂಡ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ವಾಪಸ್ ಮರಳಿ ಮನೆಗೆ ಅಂತ ಹೊರಟಿದ್ದಾರೆ ಎಂದರು.
ಸ್ವಪಕ್ಷೀಯ ಶತ್ರು ಸಂಹಾರ ಯಾಗ ಮಾಡಬೇಕು:ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯ ನೆಗಲೆಕ್ಟ್ ಮಾಡಿದ್ದಾರೆ. ಅವರಿಗೆ ಬಿಜೆಪಿ, ಜೆಡಿಎಸ್ ಭಯವಿಲ್ಲ ಸ್ವಪಕ್ಷೀಯರೇ ಅವರಿಗೆ ಭಯ. ಅವರು ಅನೇಕರ ಸೋಲಿಗೆ ಕಾರಣವಾಗಿದ್ದರು ಅಂತ ಆರೋಪವಿದೆ. ಹಿಂದೆ ಪರಮೇಶ್ವರ್ ನಾನೇ ಸಿಎಂ ಅಂತಿದ್ದರು ಅವರನ್ನೇ ಸೋಲಿಸಿದರು. ಈಗ ಸ್ವಪಕ್ಷೀಯರೇ ಅವರನ್ನ ಸೋಲಿಸ್ತಾರೆ ಅನ್ನೋ ಭಯ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ನಾನೇ ಅಂದವರನ್ನು ಪಕ್ಷದವರೇ ಸೋಲಿಸುತ್ತಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.