ಬೆಂಗಳೂರು:ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ, ಚುನಾವಣೆವರೆಗೂ ಮುಖ್ಯಮಂತ್ರಿಯಾಗಿ ಬೊಮ್ಮಾಯಿ, ರಾಜ್ಯಾಧ್ಯಕ್ಷರಾಗಿ ಕಟೀಲ್ ಇರಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ತಾಕತ್ತಿದ್ದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಪ್ರಕಟಿಸಿ ಎಂದು ಕಾಂಗ್ರೆಸ್ ನಾಯಕರಿಗೆ ನೇರ ಸವಾಲೆಸೆದಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಸಮಾವೇಶ ಆದ ನಂತರ ಕಾಂಗ್ರೆಸ್ ನಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್ ಹಾಗೂ ಉಳಿದ ಮೂಲ ಕಾಂಗ್ರೆಸ್ ನಾಯಕರೆಲ್ಲರೂ ಒಂದು ಸಭೆ ಮಾಡಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಹುಟ್ಟು ಹಬ್ಬದ ಸಮಾವೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇವರ ಒಳ ಜಗಳ ಆ ಸಮಾವೇಶ ಆದ ಬಳಿಕ ಬೀದಿಗೆ ಬಂದಿದೆ.
ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ, ತಾಕತ್ತಿದ್ದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಪ್ರಕಟಿಸಿ: ಕಾಂಗ್ರೆಸ್ ಗೆ ಅಶೋಕ್ ನೇರ ಸವಾಲು..! ಈಗ ಆ ಸಮಾವೇಶಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಒಂದು ಪಾದಯಾತ್ರೆ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈಗ ಬೀದಿಗೆ ಬಂದಿರುವ ಅವರ ಜಗಳವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಮಣ್ಣುಮುಕ್ಕುತ್ತಿರುವ ಕಾಂಗ್ರೆಸ್:ಕಾಂಗ್ರೆಸ್ ಇಡೀ ದೇಶದಲ್ಲಿ ಮಣ್ಣು ಮುಕ್ಕುತ್ತಿದೆ. ಕಾಂಗ್ರೆಸ್‌ಗೆ ತಳವೇ ಇಲ್ಲ. ಸಿದ್ದರಾಮಯ್ಯನವರಿಗಾಗಲಿ, ಕಾಂಗ್ರೆಸ್ ನವರಿಗಾಗಲಿ, ಬಿಜೆಪಿ ನೇತೃತ್ವದ ಬಗ್ಗೆ ಆಗಲಿ, ಅಧಿಕಾರ ಬದಲಾವಣೆ ಬಗ್ಗೆ ಆಗಲಿ ಮಾತನಾಡುವ ಯಾವ ನೈತಿಕತೆ ಇದೆ?. ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರ ನೇಮಕ ಮಾಡುವ ಯೋಗ್ಯತೆ ಇಲ್ಲ, ಅವರ ಪಕ್ಷದಲ್ಲಿ 21 ಜನ ರಾಷ್ಟ್ರೀಯ ನಾಯಕರು ಅವರ ನಾಯಕತ್ವದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದರು.
ಅವರ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ನಾಯಕರು ಇವತ್ತು ನಮ್ಮ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಅಮಿತ್ ಶಾ ಬಂದು ಹೇಳಿದ್ದಾರಾ? ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರಾ? ಇವರಿಗೂ ಬಿಜೆಪಿಗೂ ಏನು ಸಂಬಂಧ? ನಿಮ್ಮ ಬೀದಿ ಜಗಳವನ್ನು ನಮ್ಮ ಬಿಜೆಪಿಯವರಿಗೂ ತರಬೇಡಿ. ನಮ್ಮ ನಾಯಕತ್ವ ಬದಲಾವಣೆ ಬಗ್ಗೆ ಹೇಳುವ ನೈತಿಕತೆ, ಅಧಿಕಾರ ಎರಡು ನಿಮಗೆ ಇಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ನೆರೆ ಹಾವಳಿಯಾಗಿದೆ, ಜನರು ಮನೆ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಎಲ್ಲಿಯೂ ಕಾಂಗ್ರೆಸ್ ಒಂದೇ ಒಂದು ಟ್ವೀಟ್ ಮಾಡಿಲ್ಲ. ಬರಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈಗ ಮುಖ್ಯಮಂತ್ರಿಗಳು ಸಚಿವರು ಎಲ್ಲರೂ ನೆರೆಪೀಡಿತ ಪ್ರದೇಶಗಳಿಗೆ ಹೋಗಿ ಬಂದಿದ್ದೇವೆ. ಆದರೆ, ಕಾಂಗ್ರೆಸ್ ಜನರ ಪರವಾಗಿ ನಿಂತಿಲ್ಲ. ಬಿಬಿಎಂಪಿ, ಜಿಲ್ಲ ಪಂಚಾಯಿತಿ ಚುನಾವಣೆ ಇದೆ ಇದರ ಬಗ್ಗೆ ಮಾತೇ ಇಲ್ಲ. ಅಭಿವೃದ್ಧಿ ಕಾರ್ಯದ ಬಗ್ಗೆ ಮಾತೇ ಇಲ್ಲ. ಅವರ ಪಕ್ಷದ ಗೊಂದಲಗಳನ್ನು ಮೊದಲು ಅವರು ಸರಿಪಡಿಸಿಕೊಳ್ಳಲಿ ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಮತ್ತು ಕಟೀಲ್ ನೇತೃತ್ವದಲ್ಲಿ ಚುನಾವಣೆ : ಯಡಿಯೂರಪ್ಪ ಅಧಿಕಾರಿಕ್ಕೆ ಬಂದ ಆರು ತಿಂಗಳಿನಿಂದಲೇ ನಾಯಕತ್ವ ಬದಲಾವಣೆ ಬಗ್ಗೆ ಮಾಹಿತಿಗಳು ಹರಿದಾಡುತ್ತಿದ್ದವು. ಆದರೆ, ಯಡಿಯೂರಪ್ಪ ಎರಡು ವರ್ಷ ಅಧಿಕಾರದಲ್ಲಿದ್ದರು. ಈಗ ಬೊಮ್ಮಾಯಿ ಬಗ್ಗೆ ಅದೇ ರೀತಿ ವದಂತಿ ಹಬ್ಬುತ್ತಿದ್ದಾರೆ. ಆದರೆ ಅವರ ಬದಲಾವಣೆ ಇಲ್ಲ. ರಾಜ್ಯಾಧ್ಯಕ್ಷರಾಗಿ ಕಟೀಲ್ ಮುಂದುವರೆಯಲಿದ್ದಾರೆ.
ಬೊಮ್ಮಾಯಿ ಮತ್ತು ಕಟೀಲ್ ಅವರ ಜೋಡಿ ನೇತೃತ್ವದಲ್ಲಿ ನಾವು ಚುನಾವಣೆಯನ್ನು ಎದುರಿಸುತ್ತೇವೆ. ಅಭಿವೃದ್ಧಿ ವಿಷಯಗಳನ್ನು ಇಟ್ಟುಕೊಂಡು ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ನವರ ರೀತಿ ಕೀಳು ಪ್ರಚಾರ ಗಿಮಿಕ್ ನಾವು ಮಾಡುವುದಿಲ್ಲ. ಕಾಂಗ್ರೆಸ್ ಮಾಡಿರುವ ಟ್ವೀಟ್ ಗೆ ಬೆಲೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್‌ಗೆ ಸವಾಲು : ನಿಮಗೆ ತಾಕತ್ತಿದ್ದರೆ, ನೈತಿಕತೆ ಇದ್ದರೆ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಎಂದಿದ್ದೇವೆ. ನಿಮ್ಮ ಮುಖ್ಯಮಂತ್ರಿ ಯಾರು ಎಂದು ಹೇಳುವ ಯೋಗ್ಯತೆ ನಿಮಗೆ ಇದೆಯೇ? ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸಲು ನಿಮಗೆ ನಡುಕವಿದೆ. ಯಾರೇ ಒಬ್ಬರ ಹೆಸರನ್ನು ನಿಮ್ಮ ನಾಯಕ ಎಂದು ಪ್ರಕಟಿಸಿದ ನೋಡೋಣ, ನಿಮ್ಮಲ್ಲಿ ನಾಯಕರೇ ಇಲ್ಲ ಬರೀ ಜಗಳ, ಒಂದು ವೇಳೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದರೆ ಪಕ್ಷ ಇಬ್ಬಾಗವಾಗಲಿದೆ ಎಂದು ಹೇಳಿದರು.
ಒಂದು ಡಿಕೆಶಿ ಕಾಂಗ್ರೆಸ್ ಇನ್ನೊಂದು ಸಿದ್ದರಾಮಯ್ಯ ಕಾಂಗ್ರೆಸ್ ಈ ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ಇಬ್ಬಾಗವಾದ ಹಾಗೆ ಕರ್ನಾಟಕದಲ್ಲಿ ಮತ್ತೆ ಎರಡು ಕಾಂಗ್ರೆಸ್ ಆಗಲಿದೆ, ಮೊದಲು ನಿಮ್ಮ ನಾಯಕತ್ವ ಬಗ್ಗೆ ಸರಿಪಡಿಸಿಕೊಳ್ಳಿ. ನಂತರ ನಮ್ಮ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಓದಿ :ಜಲಜೀವನ್ ಮಿಷನ್: ಗುರಿ ಮೀರಿದ ಸಾಧನೆಗೆ ಸಿಎಂ ಬೊಮ್ಮಾಯಿ ಸಂತಸ