ಬೆಂಗಳೂರು: ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಆನ್‌ಲೈನ್ ಸಭೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳಿಗಾಗಿ ಮೇ 24ರಂದು ರಾಜ್ಯ ವ್ಯಾಪಿಯಾಗಿ, ರಾಜ್ಯದ 42,000 ಆಶಾ ಕಾರ್ಯಕರ್ತೆಯರು ತಮ್ಮ ತಮ್ಮ ಕೆಲಸದ ಸ್ಥಳದಿಂದ ಅಥವಾ ಮನೆಯಿಂದ ತಮ್ಮ ಬೇಡಿಕೆಗಳನ್ನ ಒತ್ತಾಯಿಸಿ ಆನ್‌ಲೈನ್ ಚಳವಳಿ ಮಾಡಲು ನಿರ್ಧರಿಸಿದ್ದಾರೆ.
ಇನ್ನು ಆನ್‌ಲೈನ್ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಭಾಗವಹಿಸಿ, ಸುಮಾರು 3 ಗಂಟೆಗಳ ಕಾಲ ತಾವು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ, ಕೆಲಸ ಮಾಡಲು ಅಡ್ಡಿಯಾಗುತ್ತಿರುವ ಸಮಸ್ಯೆಗಳ ಬಗ್ಗೆ, ಜನರು ಮತ್ತು ಟಾಸ್ಕ್ ಫೋರ್ಸ್ ಸಮಿತಿಯಿಂದ ಆಗುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.
ಮತ್ತೊಂದೆಡೆ ಕುಟುಂಬದ ಸದಸ್ಯರ ಆತಂಕ - ಭಯದ ನಡುವೆ ಅವರು ಎದುರಿಸುತ್ತಿರುವ ನೋವು - ಕಷ್ಟಗಳನ್ನ ಹೇಳಿಕೊಂಡಿದ್ದಾರೆ. ಹಾಗೆಯೇ ಕಳೆದ 2ತಿಂಗಳ ಮತ್ತು ಮೇ ಸೇರಿದರೆ 3 ತಿಂಗಳಿಂದ ವೇತನ ನೀಡದೇ ಇಲಾಖೆಯು ಆಶಾ ಕಾರ್ಯಕರ್ತೆಯರನ್ನ ಈ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವುದನ್ನು ಅತ್ಯಂತ ದುಃಖದಿಂದ ಹೇಳಿಕೊಂಡಿದ್ದಾರೆ.
ದಿನಸಿಗಾಗಿ ಸಾಲ ಮಾಡಬೇಕೆಂದರೂ ಸಾಲ ಸಿಗದ ಪರಿಸ್ಥಿತಿ, ಮನೆ ಬಾಡಿಗೆ ನೀಡಲು ಆಗದೇ ಮಾಲೀಕರಿಗೆ ಸಮಯಕ್ಕಾಗಿ ದೈನ್ಯತೆಯಿಂದ ಪದೇ ಪದೆ ಕೇಳುವಂತಹ ಪರಿಸ್ಥಿತಿ, ಮತ್ತೊಂದೆಡೆ ಆಶಾ ಕಾರ್ಯಕರ್ತೆಯರೇ ಸೋಂಕಿತರಾಗಿ ಬಳಲುತ್ತಿರುವುದು, ಕುಟುಂಬದ ಸದಸ್ಯರು ಸೋಂಕಿನಿಂದ ಬಳಲುತ್ತಿರುವ ಸಂಕಟಗಳನ್ನು ಜೊತೆಗೆ ಸೋಂಕಿನ ಚಿಕಿತ್ಸೆಗೆ ಪರದಾಡಿದ ಕಷ್ಟಗಳನ್ನು ಹಂಚಿಕೊಂಡರು.
ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ರಾಜ್ಯಾದ್ಯಂತೆ ಜ್ಯದಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಪಣವಾಗಿಟ್ಟು ಇಲಾಖೆ ನೀಡಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ಪೀಡಿತರನ್ನು ಇನ್ನಿತರೆ ಸಿಬ್ಬಂದಿಗಳು ಪಿಪಿಇ ಕಿಟ್ ನೊಂದಿಗೆ ಎಲ್ಲಾ ಸುರಕ್ಷಣಾ ಕ್ರಮದೊಂದಿಗೆ ಪರೀಕ್ಷೆ ಅಥವಾ ಚಿಕಿತ್ಸೆ ಮಾಡುತ್ತಾರೆ. ಆದರೆ ಬಹುತೇಕ ಕಡೆಗಳಲ್ಲಿ ಆಶಾ ಕಾರ್ಯಕರ್ತೆಯರ ಕೈಗೆ ಆಕ್ಸಿ ಮೀಟರ್ ಕೊಟ್ಟು ಸೋಂಕಿತರನ್ನು ಪರೀಕ್ಷಿಸಲು ಕಳುಹಿಸುತ್ತಾರೆ. ಅಗತ್ಯವಿರುವ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಡದೇ ಕಳಿಸುತ್ತಾರೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸುಮಾರು 20-40 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದೀಗ ಕೊರೊನಾ ಸೋಂಕಿಗೆ ಒಳಗಾಗಿರುವುದು ಕೆಲವರು ಗುಣಮುಖರಾಗಿರುವುದು ಮತ್ತೆ ಹೊಸಬರು ಸೋಂಕಿತರಾಗುತ್ತಿರುವುದು ಬೆಳಕಿಗೆ ಬಂದಿದೆ.