ಬೆಂಗಳೂರು:ಕೊರೊನಾ ನಿಯಂತ್ರಿಸಲು ಹಗಲಿರುಳೆನ್ನದೆ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಜೀವನ ನಿರ್ವಹಣೆಗಾಗಿ ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು:
ಧಾರವಾಡದಲ್ಲಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು 12 ಸಾವಿರ ರೂ. ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆಯಲ್ಲಿ ಆಶಾ ಕಾರ್ಯಕರ್ತೆಯರಿಂದ ಕೆಲಸಕ್ಕೆ ಬಹಿಷ್ಕಾರ:
ದಾವಣಗೆರೆಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂಪಾಯಿ ಗೌರವಧನ ನಿಗದಿಪಡಿಸಬೇಕು. ಕೊರೊನಾ ವಿರುದ್ಧ ಹೋರಾಡಲು ಅಗತ್ಯ ಪ್ರಮಾಣದ ಸುರಕ್ಷತಾ ಕಿಟ್ ನೀಡಬೇಕು ಎಂದು ಆಗ್ರಹಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮನವಿ ಪತ್ರ ಸಲ್ಲಿಸಿದ್ದು, ಜಿಲ್ಲೆಯಾದ್ಯಂತ ಒಟ್ಟು 1,238 ಆಶಾ ಕಾರ್ಯಕರ್ತೆಯರಿದ್ದು, ಇಂದಿನಿಂದ ಯಾರೂ ಕೆಲಸ ನಿರ್ವಹಿಸುವುದಿಲ್ಲ. ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದೇವೆ. ಮನೆಯಲ್ಲಿ ಕಷ್ಟ ಇದ್ದರೂ ಲೆಕ್ಕಿಸದೇ ಕೊರೊನಾ ವಾರಿಯರ್ಸ್ ಆಗಿ ದುಡಿದಿದ್ದೇವೆ. ಇದೆಲ್ಲಾ ಸರ್ಕಾರಕ್ಕೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸುರಪುರದಲ್ಲೂ ಪ್ರತಿಭಟನೆ
ಸುರಪುರ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದಿಂದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿದರು. ತಾಲೂಕು ಆಶಾ ಕಾರ್ಯಕರ್ತೆಯರ ಸಂಘದಿಂದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿದರು.
ವಿಜಯಪುರದಲ್ಲೂ ಪ್ರತಿಭಟನೆ :
ವಿಜಯಪುರದಲ್ಲಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು ಇಂದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದು, ನಗರದ ಡಿಹೆಚ್‌ಓ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಮಾಸಿಕ 12 ಸಾವಿರ ವೇತನ, ಆರೋಗ್ಯ ಸುರಕ್ಷಾ ಕಿಟ್ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಹಾವೇರಿ ತಾಲೂಕು ಸಮುದಾಯ ಭವನದ ಮುಂದೆ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು:
ಹಾವೇರಿಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಇಲ್ಲಿನ ತಾಲೂಕು ಸಮುದಾಯ ಭವನದ ಮುಂದೆ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು, ತಮಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಮನವಿ ಸಲ್ಲಿಸಿದರು.
ಬಿಸಿಲುನಾಡು ರಾಯಚೂರಿನಲ್ಲಿಯೂ ಪ್ರತಿಭಟನೆ:
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಭಾಗದಲ್ಲಿ ತಮ್ಮ ಕೆಲಸವನ್ನ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಕೊರೊನಾ ಸಮಯದಲ್ಲಿ ಗಟ್ಟಿತನದಿಂದ ಕೆಲಸ ಮಾಡಿದ್ದೇವೆ. ನಮ್ಮ ಕಡೆ ಸರ್ಕಾರ ಗಮನ ಕೊಡುತ್ತಿಲ್ಲ. ಬೇರೆ ಬೇರೆ ಯೋಜನೆಗಳಿಗೆ, ನಿರ್ವಹಣೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದಾಗಿ ಸರ್ಕಾರ ಹೇಳುತ್ತದೆ. ಆದರೆ ದುಡಿಯುವ ನಮ್ಮಂತ ವರ್ಗದವರಿಗೆ ಗೌರವಧನ ಏಕೆ ಹೆಚ್ಚಳ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.