ಕರ್ನಾಟಕ

karnataka

ETV Bharat / state

ಭೋವಿ, ಬಂಜಾರ ಅಲೆಮಾರಿಗಳ ಮೀಸಲಾತಿಗೆ ಕೈ ಹಾಕಿದರೆ ಪರಿಸ್ಥಿತಿ ನೆಟ್ಟಗಿರದು: ಅರವಿಂದ ಲಿಂಬಾವಳಿ

ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಮೀಸಲಾತಿ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

By

Published : Aug 6, 2023, 9:36 PM IST

Reservation Conservation State Convention Program
ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶ ಕಾರ್ಯಕ್ರಮ

ಬೆಂಗಳೂರು:"ನಾವು ಭೋವಿ ಜನಾಂಗ, ಕಲ್ಲು ಹೊಡೆಯುವ ಸಮಾಜ, ಸದಾ ಎಚ್ಚರವಾಗಿರುತ್ತೇವೆ ಎಂಬುದನ್ನು ಮರೆಯಬೇಡಿ. ಭೋವಿ, ಬಂಜಾರ ಅಲೆಮಾರಿಗಳ ಮೀಸಲಾತಿಗೆ ಕೈ ಹಾಕಿದರೆ ಪರಿಸ್ಥಿತಿ ನೆಟ್ಟಗಿರೊಲ್ಲ"ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿಂದು ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟದಿಂದ ಆಯೋಜಿಸಿದ್ದ ಸಂವಿಧಾನದ ಸಾಧನೆ ಮತ್ತು ಸವಾಲುಗಳ ಪರಾಮರ್ಶೆಗಾಗಿ ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶದಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸನ್ಮಾನ ನೆರವೇರಿಸಿ ಲಿಂಬಾವಳಿ ಮಾತನಾಡಿದರು.

ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶ ಕಾರ್ಯಕ್ರಮ

"ಸದಾಶಿವ ಆಯೋಗದ ವರದಿಯನ್ನು ಕಳೆದ ಸರ್ಕಾರ ಮುಕ್ತಾಯಗೊಳಿಸಿದೆ. ಪರಿಶಿಷ್ಟರ ಮೀಸಲಾತಿಗೆ ಕೈ ಹಾಕಿ ಹಿಂದಿನ ಸರ್ಕಾರ ನೋವು ಅನುಭವಿಸಿದೆ. ಇದು ಗೊತ್ತಿದ್ದರೂ ಕೂಡ ಇಂದಿನ ಸರ್ಕಾರ ಮತ್ತೆ ಮೀಸಲಾತಿ ವಿಚಾರದಲ್ಲಿ ಕೈ ಹಾಕುತ್ತಿದೆ. ನಮ್ಮ ಸಮಾಜದ ಒಳಿತಿಗೆ ಪೆಟ್ಟು ಬೀಳುವ ಸಂದರ್ಭದಲ್ಲಿ ಹೋರಾಟ ಮಾಡಿಯೇ ತೀರುತ್ತೇವೆ. ಸದಾಶಿವ ಆಯೋಗದ ಬಗ್ಗೆ ಯೋಚನೆ ಮಾಡಿದರೆ ಹಿಂದಿನ ಸರ್ಕಾರಕ್ಕೆ ಕಲಿಸಿದ ಪಾಠ ಮತ್ತೆ ಮರುಕಳಿಸಲಿದೆ" ಎಂದರು.

"ಬೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸಮುದಾಯದ 51 ಜಾತಿಗಳಿಗೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯುವ ಹುನ್ನಾರ ನಡೆಯುತ್ತಿದ್ದು, ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೀಸಲಾತಿಯನ್ನು ತೆಗೆದುಹಾಕಲು ಬಿಡುವುದಿಲ್ಲ. ಕೇಂದ್ರ ಎಸ್.ಸಿ/ಎಸ್.ಟಿ ಆಯೋಗಕ್ಕೂ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಕೃಷ್ಣರಾಜ ಒಡೆಯರ್ ನೀಡಿದ ಮೀಸಲಾತಿಯನ್ನು ಹಿಂಪಡೆಯಲು ಅವಕಾಶ ನೀಡುವುದಿಲ್ಲ. ಇಷ್ಟಕ್ಕೂ 2011ರ ಜನಗಣತಿ ಅವೈಜ್ಞಾನಿಕವಾಗಿದೆ. ಅಲೆಮಾರಿಗಳು ಒಂದು ಊರಿನಿಂದ ಮತ್ತೊಂದು ಊರಿಗೆ ಸದಾ ಸಂಚರಿಸುತ್ತಿರುತ್ತಾರೆ. ಇಂತಹ ಸಮುದಾಯದ ಜನಗಣತಿ ಸಾಧ್ಯವಿಲ್ಲ. ಇಂತಹ ಅವೈಜ್ಞಾನಿಕ ವರದಿ ಆಧರಿಸಿ ನಿರ್ಧಾರ ಕೈಗೊಳ್ಳುವುದು ಸಂವಿಧಾನಬಾಹಿರ ನಡೆ" ಎಂದು ಹೇಳಿದರು.

"ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್ ಪೀಠ ಇದಕ್ಕೆ ಅವಕಾಶ ನೀಡಿಲ್ಲ. ಈ ಪ್ರಕರಣದ ಬಗ್ಗೆ ಉನ್ನತ ಪೀಠ ರಚನೆಯಾಗಿ ವಿಚಾರಣೆ ನಡೆಸಬೇಕಾಗಿದೆ. ಅಗತ್ಯ ಬಿದ್ದರೆ ಕೇಂದ್ರಕ್ಕೆ ನಿಯೋಗ ತೆರಳಲು ಸಿದ್ಧ. ಮುಖ್ಯಮಂತ್ರಿಗಳನ್ನು ಸಹ ಭೇಟಿ ಮಾಡಿ ಒಳ ಮೀಸಲಾತಿ ಶಿಫಾರಸ್ಸು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು. ಒಳಮೀಸಲಾತಿಯನ್ನು ಯಾರು ವಿರೋಧ ಮಾಡಿದ್ದರೋ ಅವರೇ ರಾಜ್ಯಸಭೆಯಲ್ಲಿ ಹೇಳಿಕೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶ ಕಾರ್ಯಕ್ರಮ

ಎಸ್.ಸಿ.ಪಿ-ಟಿ.ಎಸ್.ಪಿ ಸಮುದಾಯಕ್ಕೆ ಮೀಸಲಾಗಿದ್ದ 11 ಸಾವಿರ ಕೋಟಿ ರೂಪಾಯಿ ಹಣವನ್ನು ಹಿಂಪಡೆಯಬಾರದು. ಈ ಹಣವನ್ನು ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಬಳಸಬೇಕು. ತಾಂಡ ಅಭಿವೃದ್ದಿ ನಿಗಮ, ಬೋವಿ, ಬಂಜಾರ ಅಭಿವೃದ್ಧಿ ನಿಗಮಗಳಿಗೆ ಈ ಹಣ ಹಂಚಿಕೆ ಮಾಡುವಂತೆ ಲಿಂಬಾವಳಿ ಒತ್ತಾಯಿಸಿದರು.

ಮುಂದೆ, ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ರವಿ ಮಾಕಳಿ ಮಾತನಾಡಿ, "ರಾಜ್ಯ ಸರ್ಕಾರ ನಮ್ಮ ಸಮುದಾಯಕ್ಕೆ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯೆ ನೀಡಿಲ್ಲ. ಮುಂಬರುವ ನಿಗಮ ಮಂಡಳಿ ಮತ್ತಿತರೆ ಸರ್ಕಾರಿ ನೇಮಕಾತಿಗಳಲ್ಲಿ ಅನ್ಯಾಯ ಸರಿಪಡಿಸಬೇಕು. ನಾವು ಸಂಘಟಿತರಾದಲ್ಲಿ ಮಾತ್ರ ಸರ್ಕಾರದಿಂದ ಸಮಪಾಲು ಪಡೆಯಲು ಸಾಧ್ಯ" ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತ ನಾಯ್ಕ ಮಾತನಾಡಿ, "ಕೊರಚ, ಕೊರಮ ಮತ್ತಿತರ ಜನಾಂಗಗಳು 1950 ರ ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ನಂತರ ಈ ವರ್ಗಕ್ಕೆ ಸೇರಿದ ಎಲ್ಲ ಸಮುದಾಯ ಮತ್ತು ಸಮನಾರ್ಥಕ ಹೆಸರಿಂದ ಕರೆಯಲ್ಪಡುವ ಜಾತಿಗಳನ್ನು ಸಹ ಪರಿಶಿಷ್ಟರ ಪಟ್ಟಿಗೆ ಸೇರಿದ್ದು. ನಾವು ಸಾಕಷ್ಟು ಪ್ರಾಯಾಸಪಟ್ಟು ಏಣಿ ಹತ್ತಿದ್ದೇವೆ. ನಮ್ಮನ್ನು ಕೆಳಗಿಳಿಸುವ ಪ್ರಯತ್ನ ನಡೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ನೂತನ ಶಾಸಕರಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಜುಳಾ ಲಿಂಬಾವಳಿ, ಹೂವಿನ ಹಡಗಲಿ ಕ್ಷೇತ್ರದ ಕೃಷ್ಣಾ ನಾಯಕ್, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ರೈಲ್ವೆ ಇಲಾಖೆಯನ್ನು ತುಕ್ಕು ಹಿಡಿಯುವಂತೆ ಮಾಡಿತ್ತು: ಈರಣ್ಣ ಕಡಾಡಿ

ABOUT THE AUTHOR

...view details