ಬೆಂಗಳೂರು:ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರು, ಶಾಸಕರ ಜೊತೆ ಸಭೆ ನಡೆಸಿದ್ದು, ನಾಳೆ ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ ಕೋರ್ ಕಮಿಟಿ ಸಭೆ ನಡೆಸಿ ದೆಹಲಿಗೆ ವಾಪಸ್ ಆಗಲಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಾಳೆ ಬೆಳಗ್ಗೆ 9.30 ಕ್ಕೆ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಲಿರುವ ಅರುಣ್ ಸಿಂಗ್, ಪಕ್ಷಕ್ಕೆ ಮುಂದಿನ ಟಾಸ್ಕ್ ನೀಡಲಿದ್ದಾರೆ. ಉಪ ಚುನಾವಣೆ ಸೇರಿದಂತೆ ಸದ್ಯದಲ್ಲೇ ಎದುರಾಗಲಿರುವ ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು. ಯೋಗ ದಿನಾಚರಣೆ ಆಚರಣೆ ಸೇರಿದಂತೆ ಪಕ್ಷ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಚರ್ಚೆ ನಡೆಸಿ ಸಲಹೆ, ಸೂಚನೆ ನೀಡಲಿದ್ದಾರೆ.